ಅಂಟಲ್ಯ (ಟರ್ಕಿ):ಅರ್ಚರಿ (ಬಿಲ್ಲುಗಾರಿಕೆ)ಯಲ್ಲಿ ಭಾರತ ಮಹಿಳಾ ತಂಡ ಸೋಲಿಲ್ಲದ ಸರದಾರನಂತೆ ಸಾಗುತ್ತಿದೆ. ಅರ್ಚರಿ ವಿಶ್ವಕಪ್ನ ಮೂರನೇ ಹಂತದಲ್ಲೂ ಕಾಂಪೌಂಡ್ ವಿಭಾಗದಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಚಿನ್ನದ ಸಾಧನೆ ಮಾಡಿದೆ.
ಶನಿವಾರ ಇಲ್ಲಿ ನಡೆದ ಫೈನಲ್ನಲ್ಲಿ ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರಿದ್ದ ತಂಡವು ಎಸ್ಟೋನಿಯಾದ ಲಿಸೆಲ್ ಜಾತ್ಮಾ, ಮೀರಿ ಮರಿಟಾ ಪಾಸ್ ಮತ್ತು ಮಾರಿಸ್ ಟೆಟ್ಸ್‌ಮನ್ ಅವರನ್ನು 232-229 ಅಂಕಗಳಿಂದ ಸೋಲಿಸಿದರು. ಈ ಮೂಲಕ ಋತುವಿನಲ್ಲಿ ಸತತ ಮೂರನೇ ಚಿನ್ನವನ್ನು ಗೆದ್ದುಕೊಂಡಿತು.
ವಿಶ್ವಕಪ್ನಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಭಾರತ ವನಿತೆಯರ ತಂಡಕ್ಕೆ, ಎಸ್ಟೋನಿಯಾ ವನಿತೆಯರು ಯಾವುದೇ ಹಂತದಲ್ಲಿ ಸವಾಲಾಗಲಿಲ್ಲ. ಸತತ ಅಂಕ ಗಳಿಸುತ್ತಾ ಸಾಗಿದ ಭಾರತೀಯರು ಗೆಲುವಿನ ನಗೆ ಬೀರಿದರು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶಾಂಘೈ ಮತ್ತು ಯೆಚಿಯೋನ್‌ನಲ್ಲಿ ನಡೆದ ವಿಶ್ವಕಪ್ ಹಂತ 1 ಮತ್ತು ಹಂತ 2 ರಲ್ಲಿ ಚಿನ್ನದ ಪದಕಗಳನ್ನು ಗೆದ್ದಿತ್ತು.
ಇನ್ನೊಂದು ಪಂದ್ಯದಲ್ಲಿ ಭಾರತದ ಪುರುಷರ ಕಾಂಪೌಂಡ್ ಬಿಲ್ಲುಗಾರ ಪ್ರಿಯಾಂಶ್ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ. ರಿಕರ್ವ್ ವಿಭಾಗದಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಕೂಡ ವೈಯಕ್ತಿಕ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಇದರಿಂದ ವಿಶ್ವಕಪ್ನಲ್ಲಿ ಇನ್ನೆರಡು ಪದಕಗಳು ಖಾತ್ರಿಯಾಗಿವೆ.
ಇದನ್ನೂ ಓದಿ:ಆಗಸ್ಟ್ 15ರಿಂದ ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ - Maharaja Trophy