ಜೆರುಸಲೇಂ : ಯೆಮೆನ್ನ ಹೌತಿ ಉಗ್ರರ ವಿರುದ್ಧ ಸಂಪೂರ್ಣ ಬಲದಿಂದ ದಾಳಿ ನಡೆಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ನ ಟೆಲ್ ಅವಿವ್ ಮೇಲೆ ಹೌತಿ ಉಗ್ರರು ಕ್ಷಿಪಣಿ ದಾಳಿ ನಡೆಸಿದ ಒಂದು ದಿನದ ನಂತರ ನೆತನ್ಯಾಹು ಈ ಹೇಳಿಕೆ ನೀಡಿದ್ದಾರೆ.
ಇರಾನ್ ಮತ್ತು ಅದರ ಮಿತ್ರರಾಷ್ಟ್ರಗಳ ವಿರುದ್ಧ ನಾವು ಪೂರ್ಣ ಬಲದಿಂದ ವರ್ತಿಸಿದಂತೆಯೇ ಹೌತಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ನೆತನ್ಯಾಹು ಭಾನುವಾರ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಸ್ರೇಲ್ ಏಕಾಂಗಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಒತ್ತಿ ಹೇಳಿದ ಅವರು, ಹೌತಿಗಳು ಅಂತಾರಾಷ್ಟ್ರೀಯ ಹಡಗುಗಳಿಗೆ ಮಾತ್ರವಲ್ಲದೇ ಇಡೀ ಜಾಗತಿಕ ವ್ಯವಸ್ಥೆಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂಬುದು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಇತರ ಅನೇಕ ರಾಷ್ಟ್ರಗಳ ಅಭಿಪ್ರಾಯವೂ ಆಗಿದೆ ಎಂದು ಹೇಳಿದರು.
ಜಾಣ್ಮೆಯಿಂದ ಹೌತಿಗಳ ವಿರುದ್ಧ ಕ್ರಮ: ಹೀಗಾಗಿ ನಾವು ಶಕ್ತಿ, ದೃಢನಿಶ್ಚಯ ಮತ್ತು ಜಾಣ್ಮೆಯಿಂದ ಹೌತಿಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ. ಈ ಕಾರ್ಯಾಚರಣೆ ಸಮಯ ತೆಗೆದುಕೊಂಡರೂ ಫಲಿತಾಂಶ ಮಾತ್ರ ಇತರ ಭಯೋತ್ಪಾದಕ ಗುಂಪುಗಳಿಗೆ ನಾವು ಮಾಡಿದಂತೆಯೇ ಇರುತ್ತದೆ ಎಂದು ನೆತನ್ಯಾಹು ಹೇಳಿದರು. ಇರಾನ್ ಬೆಂಬಲಿತ ಯೆಮೆನ್ನ ಹೌತಿ ಉಗ್ರರು ಶನಿವಾರ ಹಾರಿಸಿದ ಕ್ಷಿಪಣಿ ದಕ್ಷಿಣ ಟೆಲ್ ಅವಿವ್ನ ಆಟದ ಮೈದಾನದಲ್ಲಿ ಸ್ಫೋಟಗೊಂಡು 16 ಜನರು ಗಾಯಗೊಂಡಿದ್ದರು.
ಇಸ್ರೇಲ್ ಸರಣಿ ವೈಮಾನಿಕ ದಾಳಿ: ಯೆಮೆನ್ ರಾಜಧಾನಿ ಸನಾ ಮತ್ತು ಹೊದೈದಾ, ಅಸ್-ಸಾಲಿಫ್ ಮತ್ತು ರಾಸ್ ಇಸಾ ಬಂದರುಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಗುರುವಾರ ಸರಣಿ ವೈಮಾನಿಕ ದಾಳಿ ನಡೆಸಿದ ನಂತರ ಹೌತಿ ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಹೌತಿ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಯೆಮೆನ್ನ ಹೌತಿಗಳ ಮೇಲೆ ದಾಳಿ ಮಾಡುವ ಬದಲು ಅದಕ್ಕೆ ಬೆಂಬಲವಾಗಿ ನಿಂತಿರುವ ಇರಾನ್ ಮೇಲೆಯೇ ನೇರವಾಗಿ ದಾಳಿ ಆರಂಭಿಸುವುದು ಸೂಕ್ತ ಎಂದು ಮೊಸ್ಸಾದ್ ಗೂಢಚಾರ ಸಂಸ್ಥೆ ಹಾಗೂ ಇತರ ಭದ್ರತಾ ಪಡೆಗಳ ಹಿರಿಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
2023 ರ ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ನಲ್ಲಿ ಹಮಾಸ್ ನಡೆಸಿದ ದಾಳಿಗೆ ಬೆಂಬಲವಾಗಿ ಕಳೆದ ನವೆಂಬರ್ನಿಂದ ಹೌತಿಗಳು ಇಸ್ರೇಲ್ ಮೇಲೆ ಮತ್ತು ಕೆಂಪು ಸಮುದ್ರದಲ್ಲಿ ಜಾಗತಿಕ ಹಡಗು ಮಾರ್ಗಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ಇದನ್ನೂ ಓದಿ : 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್': ಪ್ರಧಾನಿ ಮೋದಿಗೆ ಕುವೈತ್ನ ಅತ್ಯುನ್ನತ ಗೌರವ - MODI IN KUWAIT