ಉಪೇಂದ್ರ ಸಾರಥ್ಯದ ವಿಭಿನ್ನ ಕಥಾಹಂದರವುಳ್ಳ 'ಯುಐ' ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರತಿಕ್ರಿಯೆಗಳೊಂದಿಗೆ ಸಾಗಿದೆ. ತನ್ನ ಮೊದಲ ದಿನ 6.95 ಕೋಟಿ ರೂಪಾಯಿ ಸಂಗ್ರಹಿಸೋ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ಸಿನಿಮಾ ಈವರೆಗೆ ಒಟ್ಟು 18.30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಸಿನಿಮಾ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ಆರಂಭಿಕ ವರದಿಯನ್ನು ಆಧರಿಸಿದ್ದು, ಈ ಅಂಕಿ-ಅಂಶ ಏರುವ ಸಾಧ್ಯತೆಗಳಿವೆ. ಸಿನಿಮಾಗೆ ಬಂದಿರುವ ಪ್ರತಿಕ್ರಿಯೆ ಬಹಳ ವಿಭಿನ್ನವಾಗಿದೆ. ಅಲ್ಲಿಗೆ ಈ ಪ್ರಾಜೆಕ್ಟ್ ಗಟ್ಟಿ ಕಥಾಹಂದರ ಹೊಂದಿದೆ ಎಂಬುದು ಸ್ಪಷ್ಟವಾಗಿದೆ.
ಒಂಭತ್ತು ವರ್ಷಗಳ ನಂತರ, ಕನ್ನಡ ಅಲ್ಲದೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರಾಂತ ನಟ-ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಉಪೇಂದ್ರ ಅವರ ನಿರ್ದೇಶನದಲ್ಲಿ ಬಂದ ಚಿತ್ರವಿದು. ತಮ್ಮ ಹಿಂದಿನ ಸಿನಿಮಾಗಳಂತೆಯೇ ವಿಭಿನ್ನ ಬಗೆಯ ಕಥೆಯೊಂದಿಗೆ ಮರಳಿದ್ದಾರೆ. ಯುಐ ತನ್ನ ಕಥೆ ಹೇಳುವಿಕೆ ಮತ್ತು ನೂತನ ಪ್ರಯೋಗದಿಂದಾಗಿ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ವಿಭಿನ್ನ ಕಥೆಗೆ ಹೆಸರುವಾಸಿಯಾಗಿರುವ ಉಪ್ಪಿ ಈ ಬಾರಿಯೂ ತಮ್ಮ ಸಿಗ್ನೇಚರ್ ಸ್ಟೈಲ್ಗೆ ಬದ್ಧರಾಗಿದ್ದಾರೆ. ಪ್ರೇಕ್ಷಕರ ತಲೆಗೆ ಕೆಲಸ ಕೊಡುವವಲ್ಲಿ ಈ ಬಾರಿಯೂ ಯಶಸ್ಸು ಕಂಡಿದ್ದಾರೆ.
ಪುಷ್ಪ 2: ದಿ ರೂಲ್, ಮುಫಾಸಾ: ದಿ ಲಯನ್ ಕಿಂಗ್ ಮತ್ತು ವಿದುತಲೈ 2 ನಂತಹ ದೊಡ್ಡ ಸಿನಿಮಾಗಳ ಸ್ಪರ್ಧೆಯ ಹೊರತಾಗಿಯೂ, ಯುಐ ಚಿತ್ರಕ್ಕೆ ಪ್ರೇಕ್ಷಕರ ಕೊರತೆ ಎದುರಾಗಿಲ್ಲ. ಉಪೇಂದ್ರ ಅವರ ಬುದ್ಧಿವಂತಿಕೆ, ಸಿನಿಅನುಭವ ಒದಗಿಸುವ ರೀತಿ ಇಂದಿಗೂ ಸಿನಿಪ್ರೇಮಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂಬುದನ್ನು ಬಾಕ್ಸ್ ಆಫೀಸ್ ಕಲೆಕ್ಷನ್ ಅಂಕಿಅಂಶ ಸಾಬೀತುಪಡಿಸುತ್ತಿದೆ.
ಚಿತ್ರದ ಬಾಕ್ಸ್ ಆಫೀಸ್ ಪ್ರಯಾಣ ಉತ್ತಮವಾಗಿ ಸಾಗಿದೆ. ಕೇವಲ ಮೂರು ದಿನಗಳಲ್ಲಿ, ಭಾರತದಲ್ಲಿ 18.30 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಮೂರನೇ ದಿನ 5.75 ಕೋಟಿ ರೂ. ಸಂಪಾದನೆಯಾಗಿದೆ. ತಮಿಳು, ತೆಲುಗು ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಿರುವ ಈ ಚಿತ್ರ ತೀವ್ರ ಪೈಪೋಟಿಯ ನಡುವೆಯೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ತರುಣ್ ಸೋನಾಲ್ To ಕೃತಿ ಕರಬಂದ, ನಾಗಚೈತನ್ಯ: 2024ರಲ್ಲಿ ಹಸೆಮಣೆಯೇರಿದ ಸೆಲೆಬ್ರಿಟಿ ಜೋಡಿಗಳು
ಮುಂಬೈನಲ್ಲಿ ನಡೆದ ಸಿನಿಮಾ ಪ್ರಮೋಶನಲ್ ಈವೆಂಟ್ನಲ್ಲಿ ಮಾತನಾಡಿದ್ದ ನಾಯಕನಟ ಉಪೇಂದ್ರ, ತಮ್ಮ ಸಿನಿಮಾ ವೀಕ್ಷಕರಿಗೆ "ಯೂನಿಕ್ ಎಕ್ಸ್ಪೀರಿಯನ್ಸ್" ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಅದರಂತೆ ಚಿತ್ರದ ಕಥೆಯನ್ನು 2040ಕ್ಕೆ ಹೊಂದಿಸಲಾಗಿದೆ. ಸಿನಿಮಾ ಸತ್ಯ ಮತ್ತು ವ್ಯವಸ್ಥೆಯ ವಿಷಯಗಳನ್ನು ಪರಿಶೀಲಿಸಿದೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ, ಮುರಳಿ ಶರ್ಮಾ, ಪಿ.ರವಿಶಂಕರ್, ಗುರುಪ್ರಸಾದ್ ಮತ್ತು ನಿಧಿ ಸುಬ್ಬಯ್ಯ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇದನ್ನೂ ಓದಿ: ರಿಷಬ್ ಶೆಟ್ರ ಬಹುಸಮಯದ ಕನಸು ನನಸು: ಕೆರಾಡಿ ಗ್ರಾಮಸ್ಥರು ಸಾಥ್ - ಡಿವೈನ್ ಸ್ಟಾರ್ ಮನದಾಳ ಇಲ್ಲಿದೆ
ಚಿತ್ರ ತೆರೆಕಂಡ ದಿನ 6.95 ಕೋಟಿ ರೂಪಾಯಿ, ಎರಡನೇ ದಿನ 5.6 ಕೋಟಿ ರೂ. ಗಳಿಸಿತ್ತು. ಕೆಲಸ ಪೂರ್ಣಗೊಳ್ಳಲು 2 ವರ್ಷಗಳನ್ನು ತೆಗೆದುಕೊಂಡ ಈ ಚಿತ್ರ ಬಿಗ್ ಬಜೆಟ್ನಲ್ಲಿ ನಿರ್ಮಿಸಲ್ಪಟ್ಟಿದೆ. ಬಿ.ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಮತ್ತು ಹೆಚ್.ಸಿ ವೇಣು ಅವರ ಕ್ಯಾಮರಾ ಕೈಚಳಕವಿರುವ ಚಿತ್ರವನ್ನು ವಿಜಯ್ ರಾಜ್ ಬಿಜಿ ಎಡಿಟ್ ಮಾಡಿದ್ದಾರೆ.