ಅಂಟಲ್ಯ (ಟರ್ಕಿ):ಅರ್ಚರಿ ವಿಶ್ವಕಪ್ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ರಿಕರ್ವ್ ಮಿಶ್ರ ಸ್ಪರ್ಧೆಯಲ್ಲಿ ಭಾರತ ತಂಡ ಮೆಕ್ಸಿಕೋ ತಂಡವನ್ನು ಸೋಲಿಸುವ ಮೂಲಕ ಕಂಚಿನ ಪದಕ ಗಳಿಸಿತು. ಚಿನ್ನ, ಬೆಳ್ಳಿಯ ಬಳಿಕ ಕಂಚನ್ನು ಗೆದ್ದುಕೊಂಡಿತು.
ವಿಶ್ವಕಪ್ ಮೂರನೇ ಹಂತದಲ್ಲಿ ನಡೆದ ಕಂಚಿನ ಪದಕಕ್ಕಾಗಿನ ಸ್ಪರ್ಧೆಯಲ್ಲಿ ಭಾರತ ರಿಕರ್ವ್ ತಂಡದ ಧೀರಜ್ ಬೊಮ್ಮದೇವರ ಮತ್ತು ಭಜನ್ ಕೌರ್ ಅವರು ನಿಖರ ಗುರಿ ಸಾಧಿಸುವಲ್ಲಿ ಸಫಲರಾದರು. ಆರಂಭಿಕ ಎರಡು ಸೆಟ್ಗಳನ್ನು ಸೋತ ಬಳಿಕ 0-2 ಹಿನ್ನಡೆಯಲ್ಲಿದ್ದ ಧೀರಜ್- ಕೌರ್ ಜೋಡಿ ಉಳಿದ ಸುತ್ತುಗಳಲ್ಲಿ ಪುಟಿದೆದ್ದಿತು.
ಮೆಕ್ಸಿಕೋದ ಅಲೆಜಾಂಡ್ರಾ ವೇಲೆನ್ಸಿಯಾ ಮತ್ತು ಮಟಿಯಾಸ್ ಗ್ರಾಂಡೆ ಮೊದಲ ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದರು. ಬಳಿಕದ ಸುತ್ತುಗಳಲ್ಲಿ 35-38, 40-39, 38-37, 38-38 ಅಂಕ ಗಳಿಸುವ ಮೂಲಕ ಭಾರತ ತಂಡವು ಮೆಕ್ಸಿಕನ್ ಎದುರಾಳಿಗಳ ವಿರುದ್ಧ 5-3 ರಲ್ಲಿ ಜಯ ಸಾಧಿಸಿದೆ.