ನವದೆಹಲಿ: ಪ್ಯಾರಿಸ್ ಒಲಿಂಪಿಕ್ 2024 ಅಂತಿಮ ಘಟಕ್ಕೆ ಬಂದು ನಿಂತಿದೆ. ಈ ಬಹು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತ ಇದೂವರೆಗೂ 6 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಒಂದು ಬೆಳ್ಳಿ ಮತ್ತು ಐದು ಕಂಚಿನ ಪದಕಗಳು ಸೇರಿವೆ. ಶೂಟಿಂಗ್ ಒಂದರಲ್ಲೇ ಭಾರತ 3 ಪದಕಗಳನ್ನು ಗೆದ್ದುಕೊಂಡಿದ್ದು ಅದರಲ್ಲೂ ಸ್ಟಾರ್ ಶೂಟರ್ ಮನು ಭಾಕರ್ ಒಬ್ಬರೇ ಎರಡು ಪದಕಗಳನ್ನು ಪಡೆದಿದ್ದಾರೆ. ಇದರೊಂದಿಗೆ ಒಲಿಂಪಿಕ್ ಡಬಲ್ ಪದಕ ವಿಜೇತರ ಪಟ್ಟಿಗೂ ಸೇರ್ಪಡೆ ಆಗಿದ್ದಾರೆ. ಹಾಗಾದ್ರೆ ಇದಕ್ಕೂ ಮೊದಲು ಭಾರತದ ಯಾವ ಕ್ರೀಡಾಪಟು ಒಲಿಂಪಿಕ್ ಡಬಲ್ ಪದಕ ವಿಜೇತರ ಪಟ್ಟಿಯಲ್ಲಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.
ನಾರ್ಮನ್ ಪ್ರಿಚರ್ಡ್:ನಾರ್ಮ್ ಪ್ರಿಚರ್ಡ್ ಭಾರತದ ಮೊದಲ ಡಬಲ್ ಪದಕ ವಿಜೇತರಾಗಿದ್ದಾರೆ. 1900ರ ಪ್ಯಾರಿಸ್ ಒಲಿಂಪಿಕ್ನಲ್ಲಿ ಪುರುಷರ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು. ಇದರೊಂದಿಗೆ 1900ರ ಪ್ಯಾರಿಸ್ ಒಲಿಂಪಿಕ್ನಲ್ಲಿ ಪುರುಷರ 200 ಮೀಟರ್ ಹರ್ಡಲ್ಸ್‌ನಲ್ಲೂ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು.
ಸುಶೀಲ್ ಕುಮಾರ್:ಭಾರತದ ಪುರುಷ ಕುಸ್ತಿಪಟು ಸುಶೀಲ್ ಕುಮಾರ್ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದಿದ್ದಾರೆ. ಒಲಿಂಪಿಕ್ನಲ್ಲಿ ಎರಡು ಪದಕ ಗೆದ್ದ ಮೊದಲ ಕುಸ್ತಿ ಪಟು ಎಂಬ ದಾಖಲೆಯನ್ನು ಬರೆದಿದ್ದಾರೆ. ಸುಶೀಲ್ ಅವರು ಬೀಜಿಂಗ್ ಒಲಿಂಪಿಕ್ 2008ರಲ್ಲಿ ಪುರುಷರ 66 ಕೆಜಿ ಕುಸ್ತಿಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ಇದರ ನಂತರ, ಅವರು ಲಂಡನ್ ಒಲಿಂಪಿಕ್ 2012ರಲ್ಲಿ ಪುರುಷರ 66 ಕೆಜಿ ಕುಸ್ತಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು.
ಪಿವಿ ಸಿಂಧು:ದೇಶಕ್ಕೆ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದುಕೊಟ್ಟ ಆಟಗಾರ್ತಿಯರಲ್ಲಿ ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಕೂಡ ಸೇರಿದ್ದಾರೆ. ಸಿಂಧು ರಿಯೊ ಒಲಿಂಪಿಕ್ 2016ರ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇದರ ನಂತರ, ಟೋಕಿಯೊ ಒಲಿಂಪಿಕ್ 2020ರ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು.