ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಪೆವಿಲಿಯನ್ ಸೇರಿದ್ದ ಕೊಹ್ಲಿ, ಎರಡನೇ ಇನ್ನಿಂಗ್ಸ್‌ನಲ್ಲಿ ಕಮ್ಬ್ಯಾಕ್ ಮಾಡಿ ಅರ್ಧಶತಕ ಸಿಡಿಸಿದರು. ಜೊತೆಗೆ, 53 ರನ್ಗಳಿಸುತ್ತಿದ್ದಂತೆ ಟೆಸ್ಟ್ ಕ್ರಿಕೆಟ್‌ನಲ್ಲಿ 9,000 ರನ್ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟರ್ ಎನಿಸಿಕೊಂಡರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್ ನಂತರ ಕೊಹ್ಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆದರು. ತೆಂಡೂಲ್ಕರ್ 15,921 ಟೆಸ್ಟ್ ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ದ್ರಾವಿಡ್ 13,265 ಮತ್ತು ಗವಾಸ್ಕರ್ 10,122 ರನ್‌ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಇದೀಗ ಕೊಹ್ಲಿ 9,000 ರನ್‌ಗಳೊಂದಿಗೆ ನಾಲ್ಕನೇ ಭಾರತೀಯ ಆಗಿದ್ದು ಒಟ್ಟಾರೆ 18ನೇ ಆಟಗಾರ ಎನಿಸಿಕೊಂಡಿದ್ದಾರೆ.
ಧೋನಿ ಹಿಂದಿಕ್ಕಿದ ಕೊಹ್ಲಿ:ಇದೇ ಟೆಸ್ಟ್ನಲ್ಲಿ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಭಾರತದ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಭಾರತೀಯ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 536 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು ಅವರು ಒಟ್ಟು 664 ಪಂದ್ಯಗಳನ್ನು ಆಡಿದ್ದಾರೆ. ಧೋನಿ 535 ಪಂದ್ಯಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.
ಇದನ್ನೂ ಓದಿ:ಮುಂಬೈ ತೊರೆದು ಆರ್ಸಿಬಿ ಸೇರ್ತಾರಾ ಸ್ಪೋಟಕ ಬ್ಯಾಟರ್?: ಇವರು ಬಂದ್ರೆ 'ಈ ಸಲ್ ಕಪ್ ನಮ್ದೆ'!