ಕೇಪ್ಟೌನ್:ವೈಯಕ್ತಿಕ ಕಾರಣದಿಂದಾಗಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಿಂದ ಹೊರಗುಳಿದಿರುವುದು ತಂಡಕ್ಕೆ ಭಾರಿ ನಷ್ಟ ಉಂಟು ಮಾಡಿದೆ. ಹಿರಿಯ ಆಟಗಾರನ ಅನುಪಸ್ಥಿತಿಯ ತಂಡವನ್ನು ಕಾಡುತ್ತಿದೆ. ಇದರ ಜೊತೆಗೆ ಎದುರಾಳಿ ತಂಡಕ್ಕೂ ರನ್ ಮಷಿನ್ ಗೈರು ಸರಣಿಯೇ ನೀರಸ ಎನಿಸುತ್ತಿದೆ. ಆಂಗ್ಲ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಕ್ರೀಡಾ ಮಾಧ್ಯಮವೊಂದರಲ್ಲಿ ಮಾತನಾಡಿ, "ವಿರಾಟ್ ಕೊಹ್ಲಿ ಇಲ್ಲದ ಸರಣಿ ಸಪ್ಪೆ ಎನಿಸುತ್ತದೆ. ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲು ಸಾಧ್ಯವಾಗದಿರುವುದು ದುರದೃಷ್ಟಕರ. ಅವರೊಬ್ಬ ಶ್ರೇಷ್ಠ ಆಟಗಾರ, ಅವರ ಉತ್ಸಾಹ ಕ್ರೀಡಾಂಗಣದಲ್ಲಿ ಎಂದಿಗೂ ಕಡಿಮೆಯಾಗುವುದಿಲ್ಲ. ಅವರನ್ನು ಸರಣಿ ಮಿಸ್ ಮಾಡಿಕೊಳ್ಳುತ್ತಿದೆ" ಎಂದು ಹೇಳಿದ್ದಾರೆ.
"ವೈಯಕ್ತಿಕ ಮತ್ತು ಕುಟುಂಬ ಕಾರಣಗಳು ಎಲ್ಲರಿಗೂ ಮೊದಲ ಆದ್ಯತೆ. ವೈಯಕ್ತಿಕ ಕಾರಣದಿಂದಾಗಿ ವಿರಾಟ್ ಸರಣಿಯಲ್ಲಿ ಆಡದಿರುವ ನಿರ್ಧಾರ ಸರಿ. ಆದರೆ, ಅವರ ಸ್ಥಾನದಲ್ಲಿ ಅವಕಾಶ ಪಡೆದುಕೊಂಡಿರುವ ಯುವ ಕ್ರಿಕೆಟಿಗರು ಸದುಪಯೋಗ ಪಡೆದುಕೊಳ್ಳಬೇಕು. ಇದೊಂದು ಉತ್ತಮ ಅವಕಾಶ. ತಮ್ಮ ಕೌಶಲ್ಯವನ್ನು ಸಾಬೀತುಪಡಿಸಬೇಕು" ಎಂದು ಸಲಹೆ ನೀಡಿದ್ದಾರೆ.
ಬಾಜ್ಬಾಲ್ಗೆ ಮೆಚ್ಚುಗೆ:ಶಾಂತಚಿತ್ತದ ಕ್ರಿಕೆಟ್ ಮಾದರಿಯಾದ ಟೆಸ್ಟ್‌ನಲ್ಲಿ ಬಾಜ್ಬಾಲ್ನಂತಹ ಹೊಡಿಬಡಿ ಶೈಲಿಯನ್ನು ಪರಿಚಯಿಸಿರುವ ಇಂಗ್ಲೆಂಡ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬ್ರಾಡ್, "ಆಂಗ್ಲರ ಪ್ರಸಿದ್ಧ ‘ಬಾಜ್ಬಾಲ್’ ಶೈಲಿ ವಿಶ್ವದಾದ್ಯಂತ ಅಭಿಮಾನಿಗಳ ಮನ ಗೆಲ್ಲುತ್ತಿದೆ. ಇದು ಟೆಸ್ಟ್ ಪಂದ್ಯವನ್ನು ರೋಚಕಗೊಳಿಸುತ್ತದೆ. ವೈಯಕ್ತಿಕವಾಗಿ ನಾನು ಬಾಜ್ಬಾಲ್ ಶೈಲಿಯನ್ನು ಇಷ್ಟಪಡುವೆ. ಭಾರತದಲ್ಲೂ ಇದನ್ನು ಪ್ರಯೋಗಿಸಿದ ತಂಡ ಯಶಸ್ಸು ಕಂಡಿದೆ. ಇಂಗ್ಲೆಂಡ್ ಮಾತ್ರವಲ್ಲದೇ ಬೇರೆ ಖಂಡದಲ್ಲೂ ಪ್ರಯೋಗ ಮಾಡಬಹುದು ಎಂಬುದನ್ನು ತಂಡ ಸಾಬೀತು ಮಾಡಿದೆ" ಎಂದು ಹೇಳಿದರು.