India vs England 2nd T20: ಇಂಗ್ಲೆಂಡ್ ಮತ್ತು ಭಾರತದ ನಡುವಿನ 5 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಇಂದು ನಡೆಯಲಿದೆ. ಈ ಪಂದ್ಯಕ್ಕೆ ಚೆನ್ನೈನ ಎಂಎ ಚಿದಂಬರಂ ಮೈದಾನ ಆತಿಥ್ಯ ವಹಿಸಿಕೊಂಡಿದೆ.
ಕೋಲ್ಕತ್ತಾದ ಈಡೇನ್ ಗಾರ್ಡನ್ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಕಮಾಲ್ ಮಾಡಿದ್ದರೇ, ಯುವ ದಾಂಡಿಗ ಅಭಿಶೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ನಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ತಮ್ಮ ಇನ್ನಿಂಗ್ಸ್ನಲ್ಲಿ ಅಭಿಷೇಕ್ ವೇಗವಾಗಿ 79 ರನ್ ಕಲೆಹಾಕಿದ್ದರು. ಅದರಲ್ಲೂ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಭಾರತದ ಪರ ವೇಗವಾಗಿ ಅರ್ಧಶತಕ ಸಿಡಿಸಿದ ಎರಡನೇ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಆದರೆ, ಎರಡನೇ ಪಂದ್ಯದಿಂದ ಅಭಿಷೇಕ್ ಶರ್ಮಾ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.
ಹೌದು, ಎರಡನೇ ಪಂದ್ಯಕ್ಕೂ ಮೊದಲು ಅಭಿಷೇಕ್ ಶರ್ಮಾ ಗಾಯಗೊಂಡಿದ್ದಾರೆ. ಅಭ್ಯಾಸದ ವೇಳೆ ಕ್ಯಾಚ್ ಪ್ರಾಕ್ಟಿಸ್ ಮಾಡುತ್ತಿದ್ದಾಗ ಅವರ ಪಾದದ ತಿರುವಿನಿಂದಾಗಿ ಗಾಯಗೊಂಡಿದ್ದಾರೆ. ಬಳಿಕ ಮೈದಾನದಲ್ಲಿ ಕುಳಿತು ನೋವಿನಿಂದ ನರಳುತ್ತಿರುವುದು ಕಂಡುಬಂದಿದೆ.
ನಂತರ, ತಂಡದ ಫಿಸಿಯೋ ಆಗಮಿಸಿ ಅವರನ್ನು ಪರೀಕ್ಷಿಸಿ ವಿಶ್ರಾಂತಿಗಾಗಿ ಪೆವಿಲಿಯನ್‌ಗೆ ಕರೆದೊಯ್ದರು. ಇದಾದ ಬಳಿಕ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಅಭಿಷೇಕ್ ಮೈದಾನ ಆಗಮಿಸಲಿಲ್ಲ. ಒಂದು ವೇಳೆ ಅವರು ಎರಡನೇ ಪಂದ್ಯದಿಂದ ಹೊರಗುಳಿದರೇ ಅಭಿಷೇಕ್ ಶರ್ಮಾ ಬದಲಿಗೆ ಅವರ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್ ಅಥವಾ ಧ್ರುವ್ ಜುರೆಲ್ ತಂಡ ಸೇರು ಸಾಧ್ಯತೆಗಳಿವೆ. ಓಪನರ್ ಜವಾಬ್ದಾರಿ ತಿಲಕ್ ವರ್ಮಾ ವಹಿಸಿಕೊಳ್ಳುವ ಸಾಧ್ಯತೆಯಿದೆ.
ಸದ್ಯ, ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದ್ದು, ಇದೀಗ ಎರಡನೇ ಪಂದ್ಯದ ಮೇಲೆ ಸೂರ್ಯಕುಮಾರ್ ಪಡೆ ಕಣ್ಣಿಟ್ಟಿದೆ. ಮೊತ್ತೊಂದೆಡೆ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಆಂಗ್ಲರು ಈ ಪಂದ್ಯದಲ್ಲಿ ಪುಟಿದೆದ್ದು ಭಾರತದ ವಿರುದ್ಧ ಗೆಲ್ಲಲು ತಯಾರಿ ಯೋಜನೆ ರೂಪಿಸಿದೆ.
ಹೆಡ್ ಟು ಹೆಡ್:ಭಾರತ ಮತ್ತು ಇಂಗ್ಲೆಂಡ್ ಇದುವರೆಗೂ ಒಟ್ಟು 25 ಟಿ20 ಪಂದ್ಯಗಳನ್ನು ಆಡಿವೆ. ಇದರಲ್ಲಿ ಭಾರತ 14 ಬಾರಿ ಗೆಲುವು ಸಾಧಿಸಿ ಆಂಗ್ಲರ ಮೇಲೆ ಪ್ರಾಬಲ್ಯ ಸಾಧಿಸಿದೆ. ಈ ಅವಧಿಯಲ್ಲಿ ಇಂಗ್ಲೆಂಡ್ 11 ಪಂದ್ಯಗಳನ್ನು ಗೆದ್ದು ಕೊಂಡಿದೆ.
ಮೊದಲ ಪಂದ್ಯದ ಹೈಲೈಟ್:ಬುಧವಾರ ಇಂಗ್ಲೆಂಡ್ ಮತ್ತು ಭಾರತ ನಡುವೆ ಮೊದಲ ಟಿ20 ಪಂದ್ಯ ನಡೆದಿತ್ತು. ಈಡೇನ್ ಗಾರ್ಡನ್ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆಂಗ್ಲರು ಭಾರತೀಯರ ಬೌಲಿಂಗ್ ದಾಳಿಗೆ ಸಿಲುಕಿ 132 ರನ್ಗಳಿಸಲು ಮಾತ್ರ ಸಾಧ್ಯವಾಯಿತು. ಇದನ್ನು ಬೆನ್ನತ್ತಿದ ಭಾರತ ಅಭಿಷೇಕ್ ಶರ್ಮಾ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 12.5 ಓವರ್ಗಳಲ್ಲಿ ಗುರಿಯನ್ನು ತಲುಪಿ ಪಂದ್ಯವನ್ನು ಗೆದ್ದುಕೊಂಡಿತು. ಬೌಲಿಂಗ್ನಲ್ಲಿ ವರುಣ್ ಚಕ್ರವರ್ತಿ 3 ವಿಕೆಟ್ ಮತ್ತು ಅರ್ಷದೀಪ್ ಸಿಂಗ್ ಎರಡು ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ:ಇಂದು ಭಾರತ - ಇಂಗ್ಲೆಂಡ್ ಎರಡನೇ T20: ಪಂದ್ಯ ಉಚಿತವಾಗಿ ವೀಕ್ಷಿಸಲು ಹೀಗೆ ಮಾಡಿ!