ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ಎಲ್ಲಾ ಮೂರು ಸ್ವರೂಪಗಳ (ಟೆಸ್ಟ್, ಏಕದಿನ ಮತ್ತು ಟಿ20I) ವಾರ್ಷಿಕ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದರೆ, ಭಾರತ ಏಕದಿನ ಮತ್ತು ಟಿ20I ಮಾದರಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿದೆ.
ಟೆಸ್ಟ್ನಲ್ಲಿ ಮೊದಲ ಸ್ಥಾನದಲ್ಲಿದ್ದ ಭಾರತ 2ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ (2021-23) ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಡಿಸೈಡ್‌ನಲ್ಲಿ ಭಾರತ ತಂಡವನ್ನು 209 ರನ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ಪರಾಕ್ರಮ ಮೆರೆದಿತ್ತು. ಇದರ ಫಲವಾಗಿ ಆಸ್ಟ್ರೇಲಿಯಾ ಇದೀಗ ನಂಬರ್ 1 ಟೆಸ್ಟ್ ತಂಡವಾಗಿ ಹೊರಹೊಮ್ಮಿದೆ.
ಟೆಸ್ಟ್ ರೇಟಿಂಗ್, ಯಾರಿಗೆ ಎಷ್ಟು?:ಟೆಸ್ಟ್ ಕ್ರಿಕೆಟ್‌ನಲ್ಲಿ 124 ಅಂಕಗಳೊಂದಿಗೆ ಆಸ್ಟ್ರೇಲಿಯಾ ಮೊದಲ ಸ್ಥಾನಕ್ಕೆ ಜಿಗಿದರೆ, ಭಾರತ 120 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 105 ಅಂಕಗಳೊಂದಿಗೆ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 103 ಅಂಕಗಳೊಂದಿಗೆ 100ರಳ ಗಡಿ ದಾಟಿದ ನಾಲ್ಕನೇ ತಂಡ. ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ 4 ಅಂಕಗಳ ಅಂತರವಿದ್ದರೆ, ಇಂಗ್ಲೆಂಡ್ ಮತ್ತು ಭಾರತದ ನಡುವೆ 5 ಅಂಕಗಳ ಅಂತರವಿದೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ಕೇವಲ 3 ಅಂಕಗಳ ಅಂತರವನ್ನು ಕಾಣಬಹುದು.
ಇನ್ನು, ನ್ಯೂಜಿಲೆಂಡ್ (96), ಪಾಕಿಸ್ತಾನ (89), ಶ್ರೀಲಂಕಾ (83), ವೆಸ್ಟ್ ಇಂಡೀಸ್ (82) ಮತ್ತು ಬಾಂಗ್ಲಾದೇಶ (53) ತಂಡಗಳು ಹಳೆಯ ಸ್ಥಾನದಲ್ಲೇ ಇವೆ. ಮೊದಲ ಹಾಗೂ ಎರಡನೇ ಸ್ಥಾನಗಳು ಮಾತ್ರ ಪಲ್ಲಟಗೊಂಡರೆ, ಮೂರರಿಂದ ಒಂಬತ್ತನೇ ಶ್ರೇಯಾಂಕದ ತಂಡಗಳ ಕ್ರಮ ಒಂದೇ ಆಗಿದೆ. ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಇನ್ನೂ ಟೆಸ್ಟ್‌ಗಳನ್ನು ಆಡಬೇಕಾಗಿದ್ದು ಕೇವಲ ಒಂಬತ್ತು ತಂಡಗಳು ಈಗ ಶ್ರೇಯಾಂಕ ಪಡೆದಿವೆ. ಜಿಂಬಾಬ್ವೆ ಕಳೆದ ಮೂರು ವರ್ಷಗಳಲ್ಲಿ ಕೇವಲ ಮೂರು ಟೆಸ್ಟ್‌ಗಳನ್ನು ಆಡಿದ ಕಾರಣ ಶ್ರೇಯಾಂಕದಿಂದ ಹೊರಗಿದೆ. ಮೂರು ವರ್ಷಗಳ ಅವಧಿಯಲ್ಲಿ ತಂಡಗಳು ಶ್ರೇಯಾಂಕ ಪಟ್ಟಿಗೆ ಬರಲು ಕನಿಷ್ಠ 8 ಟೆಸ್ಟ್‌ಗಳನ್ನು ಆಡಬೇಕು ಎಂಬ ನಿಯಮವಿದೆ.
ಭಾರತ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಿಂದ ಕುಸಿದಿರಬಹುದು. ಆದರೆ, ಏಕದಿನ ಮತ್ತು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪ್ರಾಬಲ್ಯವನ್ನು ಹಾಗೆಯೇ ಉಳಿಸಿಕೊಂಡಿದೆ. ಸದ್ಯದ ವಾರ್ಷಿಕ ರ್ಯಾಂಕಿಂಗ್ನಲ್ಲಿ ಭಾರತ ಏಕದಿನ ಮತ್ತು ಟಿ20I ಸ್ವರೂಪಗಳಲ್ಲಿ ಅಗ್ರಸ್ಥಾನದಲ್ಲಿದೆ. ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿರಬಹುದು. ಆದರೆ, 6 ಅಂಕಗಳನ್ನು ಹೆಚ್ಚಿಸಿದೆ. ಏಕದಿನದಲ್ಲಿ 122 ರೇಟಿಂಗ್ ಹೊಂದಿರುವ ಭಾರತ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ (116) ಎರಡು, ದಕ್ಷಿಣ ಆಫ್ರಿಕಾ (112) ಮೂರು, ಪಾಕ್ (106) ನಾಲ್ಕನೇ ಮತ್ತು ನ್ಯೂಜಿಲೆಂಡ್ (101) 5ನೇ ಸ್ಥಾನದಲ್ಲಿವೆ. ಉಳಿದ ಟಾಪ್ 10ರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ಐರ್ಲೆಂಡ್ ತಂಡ ಜಿಂಬಾಬ್ವೆಯನ್ನು ಹಿಂದಿಕ್ಕಿ 11ನೇ ಸ್ಥಾನಕ್ಕೆ ತಲುಪಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 6 ಅಂಕಗಳ ಅಂತರವಿದ್ದರೆ, ದಕ್ಷಿಣ ಆಫ್ರಿಕಾವು ಆಸ್ಟ್ರೇಲಿಯಾ ತಂಡಕ್ಕಿಂತ ನಾಲ್ಕು ಅಂಕಗಳ ಹಿಂದಿದೆ. ಐದನೇ ಸ್ಥಾನಲ್ಲಿರುವ ನ್ಯೂಜಿಲೆಂಡ್, ಸ್ಥಾನ 4ರಲ್ಲಿರುವ ಪಾಕಿಸ್ತಾನಕ್ಕಿಂತ 5 ಅಂಕಗಳ ಹಿಂದಿದೆ. ಏಳನೇ ಸ್ಥಾನದಲ್ಲಿರುವ ಶ್ರೀಲಂಕಾ (93) ಈಗ ಆರನೇ ಸ್ಥಾನದಲ್ಲಿರುವ ಇಂಗ್ಲೆಂಡ್ (95) ಗಿಂತ ಕೇವಲ ಎರಡು ರೇಟಿಂಗ್ ಪಾಯಿಂಟ್‌ಗಳ ಹಿಂದಿದ್ದು, ಬಾಂಗ್ಲಾದೇಶ (86), ಅಫ್ಘಾನಿಸ್ತಾನ (80) ಮತ್ತು ವೆಸ್ಟ್ ಇಂಡೀಸ್ (69) ಅಗ್ರ 10 ರೊಳಗೆ ಸ್ಥಾನ ಪಡೆದಿವೆ.
ಟಿ20 ಅಂತಾರಾಷ್ಟ್ರೀಯ ತಂಡಗಳ ಶ್ರೇಯಾಂಕದಲ್ಲಿ ಸಹ ಭಾರತ ತಂಡವು 264 ರೇಟಿಂಗ್ನೊಂದಿಗೆ ಅಗ್ರಸ್ಥಾನದಲ್ಲಿದೆ. ಆದರೂ ಅವರ ಮುನ್ನಡೆ 11 ಅಂಕಗಳಿಂದ ಕೇವಲ 7ಕ್ಕೆ ಇಳಿದಿದೆ. ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ (257) ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ (252) ಮುಂದೆ ಜಿಗಿದಿದೆ. ದಕ್ಷಿಣ ಆಫ್ರಿಕಾ (250) ಆರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಜಿಗಿದರೆ, ಪಾಕಿಸ್ತಾನ ಎರಡು ಸ್ಥಾನ ಕಳೆದುಕೊಂಡು ಏಳನೇ ಸ್ಥಾನಕ್ಕೆ ಕುಸಿದಿದೆ. ಸ್ಕಾಟ್ಲೆಂಡ್ (192) ಗಮನಾರ್ಹ ಸುಧಾರಣೆಯೊಂದಿಗೆ ಜಿಂಬಾಬ್ವೆ (191) ಅನ್ನು ಹಿಂದಿಕ್ಕಿ 12ನೇ ಸ್ಥಾನವನ್ನು ಪಡೆದುಕೊಂಡಿದೆ. ನ್ಯೂಜಿಲೆಂಡ್ ಸಹ ದಕ್ಷಿಣ ಆಫ್ರಿಕಾದಂತೆಯೇ 250 ಅಂಕಗಳನ್ನು ಹೊಂದಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ಗೆ ಆಯ್ಕೆಯಾದ ಟೀಂ ಇಂಡಿಯಾದಲ್ಲಿ IPL ತಂಡಗಳ ಪ್ರಾತಿನಿಧ್ಯವೆಷ್ಟು? - T20 World Cup 2024