WTC Points Table: ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅನೀರಿಕ್ಷಿತ ಸೋಲನ್ನು ಕಂಡಿದೆ. ಟೆಸ್ಟ್ನಲ್ಲಿ ಸತತ ಗೆಲುವಿನೊಂದಿಗೆ ಮುನ್ನುಗ್ಗುತ್ತಿದ್ದ ಭಾರತದ ಓಟಕ್ಕೆ ಕಿವೀಸ್ ಪಡೆ ಬ್ರೇಕ್ ಹಾಕಿದೆ. ಮೊದಲ ಟೆಸ್ಟ್ನಲ್ಲಿ ಕಿವೀಸ್ ಪಡೆ ರೋಹಿತ್ ಸೈನ್ಯವನ್ನು 8 ವಿಕೆಟ್ಗಳಿಂದ ಸೋಲಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ನೀಡಿದ್ದ 107 ರನ್ಗಳ ಸಾಧಾರಣ ಗುರಿಯನ್ನು ನ್ಯೂಜಿಲೆಂಡ್ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಂತರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-25 ಋತುವಿನ ಅಂಕಪಟ್ಟಿಯಲ್ಲಿ ಕೆಲ ಬದಲಾವಣೆಗಳು ಕಂಡು ಬಂದಿವೆ. ಆದರೆ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಸೋತರೂ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಭಾರತ 98 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಆದರೆ ಶೇಕಡವಾರು ಅಂಕಗಳಲ್ಲಿ ಭಾರೀ ಕುಸಿತ ಕಂಡಿದೆ.
ಇದಕ್ಕೂ ಮೊದಲು ಶೇಕಡಾ ಅಂಕ 74.24 ಹೊಂದಿದ್ದ ಭಾರತ ಬೆಂಗಳೂರು ಟೆಸ್ಟ್ ಸೋಲಿನ ಬಳಿಕ 68.06ಕ್ಕೆ ಇಳಿದಿದೆ. ಮತ್ತೊಂದೆಡೆ ಈ ಐತಿಹಾಸಿಕ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡ ಪಟ್ಟಿಯಲ್ಲಿ ಆರನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಕಿವಿಸ್ ಶೇಕಡ ಅಂಕ 44.40 ರೊಂದಿಗೆ ಇಂಗ್ಲೆಂಡ್ (43.06) ಅನ್ನು ಹಿಂದಿಕ್ಕಿತು. ಆದಾಗ್ಯೂ, ಪಾಯಿಂಟ್‌ಗಳ ವಿಷಯದಲ್ಲಿ ಇಂಗ್ಲೆಂಡ್ (93), ಕಿವೀಸ್ (48) ಗಿಂತ ಉತ್ತಮವಾಗಿದೆ. ಈ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ (62.50) ಮತ್ತು ಶ್ರೀಲಂಕಾ (55.56) ನಂತರ ಸ್ಥಾನಗಳಲ್ಲಿವೆ.