ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಮಂಗಳವಾರ ನಡೆದ ಹಾಕಿ ಸೆಮಿಫೈನಲ್‌ನಲ್ಲಿ ಭಾರತ ತಂಡವು ಜರ್ಮನಿ ವಿರುದ್ಧ 2-3 ಗೋಲುಗಳಿಂದ ಸೋತಿದೆ. ಇದರೊಂದಿಗೆ ಒಲಿಂಪಿಕ್ಸ್ ಚಿನ್ನದ ಕನಸು ಮತ್ತೊಮ್ಮೆ ಈಡೇರಲಿಲ್ಲ. 44 ವರ್ಷಗಳ ಬಳಿಕ ಮೊದಲ ಬಾರಿಗೆ ಒಲಿಂಪಿಕ್ಸ್‌ನ ಹಾಕಿ ಫೈನಲ್‌ಗೆ ಪ್ರವೇಶಿಸುವ ಅವಕಾಶವನ್ನು ಟೀಂ ಇಂಡಿಯಾ ಕಳೆದುಕೊಂಡಿತು.
ಪಂದ್ಯದ ಆರಂಭದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ತೋರಿತು. ಆರಂಭಿಕ ಆಟದಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸಿದರೆ, ತದನಂತರ ಜರ್ಮನ್ನರು ತಿರುಗೇಟು ನೀಡುತ್ತ ಸಾಗಿದರು. 1980ರ ಕ್ರೀಡಾಕೂಟದ ನಂತರ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಲು ಭಾರತ ತಂಡಕ್ಕೆ ಇದೊಂದು ಸುವರ್ಣಾವಕಾಶವಾಗಿತ್ತು. ಆದರೆ, ನಾಲ್ಕನೇ ಮತ್ತು ಅಂತಿಮ ಕ್ವಾರ್ಟರ್‌ನಲ್ಲಿ ಜರ್ಮನಿಯು ನಿರ್ಣಾಯಕ ಗೋಲಿನೊಂದಿಗೆ ಭಾರತೀಯರ ಆಸೆಗೆ ತಣ್ಣೀರೆರಚಿತು.
ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ (7ನೇ ನಿಮಿಷ) ಮತ್ತು ಸುಖಜೀತ್ ಸಿಂಗ್ (36ನೇ ನಿಮಿಷ) ಗೋಲು ಬಾರಿಸಿದರೆ, ಜರ್ಮನಿಗೆ ಗೊಂಜಾಲೊ ಪೆಯಿಲತ್ (18ನೇ ನಿಮಿಷ), ಕ್ರಿಸ್ಟೋಫರ್ ರುಹ್ರ್ (27ನೇ ನಿಮಿಷ) ಮತ್ತು ಮಾರ್ಕೊ ಮಿಲ್ಟ್‌ಕೌ (54ನೇ ನಿಮಿಷ) ಗೋಲು ಸಿಡಿಸಿ ಮೇಲುಗೈ ಒದಗಿಸಿದರು. ಇದೀಗ, ಭಾರತವು ಕಂಚಿನ ಪದಕಕ್ಕಾಗಿ ಸ್ಪೇನ್ ವಿರುದ್ಧ ಸೆಣಸಲಿದೆ. ಮತ್ತೊಂದೆಡೆ, ಜರ್ಮನಿಯು ಫೈನಲ್‌ನಲ್ಲಿ ಚಿನ್ನಕ್ಕಾಗಿ ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ.
ಆರಂಭಿಕ ಕ್ವಾರ್ಟರ್‌ನಲ್ಲಿ ಜರ್ಮನ್ ರಕ್ಷಣಾ ಪಡೆಯನ್ನು ಹಿಂದಿಕ್ಕಿದ್ದ ಭಾರತೀಯರು ಮುನ್ನಡೆಯಲ್ಲಿದ್ದರು. ಈ ಹೊತ್ತಲ್ಲೇ ಹರ್ಮನ್‌ಪ್ರೀತ್ ಪಂದ್ಯದ ಮೊದಲ ಗೋಲು ಗಳಿಸಿ ಭಾರತದ ಸಂಭ್ರಮಕ್ಕೆ ಕಾರಣರಾದರು. ಆದರೆ, ಸಿಡಿದೆದ್ದ ಜರ್ಮನ್ನರು ಎರಡನೇ ಕ್ವಾರ್ಟರ್‌ನಲ್ಲಿ ಗೋಲಿನೊಂದಿಗೆ ಸಮಬಲ ಸಾಧಿಸಿದರು. ಪೆನಾಲ್ಟಿ ಕಾರ್ನರ್‌ನಿಂದ ಪೀಲಾಟ್ ಮೂಲಕ ಬಂದ ಚೆಂಡನ್ನು ರೂಹ್ರ್ ಗೋಲ್ ಆಗಿ ಪರಿವರ್ತಿಸಿದರು.
36ನೇ ನಿಮಿಷದಲ್ಲಿ ಭಾರತದ ಆಟಗಾರರು ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು. ಹರ್ಮನ್‌ಪ್ರೀತ್ ಅವರ ಫ್ಲಿಕ್‌ನಿಂದ ಬಂದ ಚೆಂಡನ್ನು ಸುಖಜೀತ್ ಉತ್ತಮವಾಗಿ ಡಿಫ್ಲೆಡ್ ಮಾಡಿದರು. ಆದರೆ, ನಾಲ್ಕನೇ ಮತ್ತು ಅಂತಿಮ ಕ್ವಾರ್ಟರ್‌ನಲ್ಲಿ ಜರ್ಮನ್ನರು ತೀವ್ರ ಆಕ್ರಮಣಕಾರಿ ಆಟ ತೋರಿದರು. ಅಂತಿಮ ಆಟದಲ್ಲಿ ಕೇವಲ 6 ನಿಮಿಷಗಳಿರುವಾಗ ಮಿಲ್ಟ್‌ಕೌ ಗೋಲು ಸಿಡಿಸಿ, ಭಾರತೀಯರಿಗೆ ಆಘಾತ ನೀಡಿದರಲ್ಲದೇ, ಜರ್ಮನ್ ತಂಡಕ್ಕೆ ಗೆಲುವು ತಂದಿತ್ತರು.
11 ಪೆನಾಲ್ಟಿ ಕಾರ್ನರ್ ಅವಕಾಶ ಪಡೆದರೂ ಕೂಡ ಭಾರತ ಕೇವಲ ಒಮ್ಮೆ ಮಾತ್ರ ಗೋಲ್ ಆಗಿ ಪರಿವರ್ತಿಸುವಲ್ಲಿ ಯಶ ಕಂಡರು. ಇದು ಟೀಂ ಇಂಡಿಯಾಕ್ಕೆ ಹಿನ್ನಡೆ ತಂದಿತು. ಪಂದ್ಯದಲ್ಲಿ ಹೆಚ್ಚಿನ ಅವಕಾಶಗಳಿದ್ದರೂ ಮೇಲುಗೈ ಸಾಧಿಸಲು ವಿಫಲರಾದರು. ಮತ್ತೊಂದೆಡೆ, ಜರ್ಮನಿ ಕೇವಲ ನಾಲ್ಕು ಪೆನಾಲ್ಟಿ ಕಾರ್ನರ್ಗಳು ಸಿಕ್ಕರೂ ಕೊನೆಯಲ್ಲಿ ಜಯದ ನಗೆ ಬೀರಿತು.
ಇದನ್ನೂ ಓದಿ:ಪ್ಯಾರಿಸ್ ಒಲಿಂಪಿಕ್ಸ್: 8 ತಾಸಿನಲ್ಲಿ 3 ಜಟ್ಟಿಗಳ ಬಗ್ಗುಬಡಿದು ಫೈನಲ್ ತಲುಪಿದ ವಿನೇಶ್ ಪೋಗಟ್ - Vinesh Phogat