ವಿಶಾಖಪಟ್ಟಣ:ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ದ್ವಿಶತಕ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಯ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಮುನ್ನಡೆ ಸಾಧಿಸಿದೆ. ಎರಡನೇ ದಿನದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್ನಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿರುವ ರೋಹಿತ್ ಪಡೆ 171 ರನ್ಗಳ ಮುನ್ನಡೆಯಲ್ಲಿದೆ.
ಇದಕ್ಕೂ ಮುನ್ನ ಎರಡನೇ ದಿನದಾಟ ಆರಂಭಿಸಿದ ಭಾರತ 396 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಯಶಸ್ವಿ ಜೈಸ್ವಾಲ್ ಚೊಚ್ಚಲ ದ್ವಿಶತಕ (209) ದಾಖಲಿಸಿದರು. 290 ಎಸೆತಗಳನ್ನು ಎದುರಿಸಿದ ಯುವ ಬ್ಯಾಟರ್, 19 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿದರು. ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸಿದರು.
ಇದಕ್ಕೂ ಮುನ್ನ ಅಶ್ವಿನ್ 20 ರನ್ಗೆ ಔಟಾಗಿದ್ದರು. ಉಳಿದಂತೆ ಬಾಲಂಗೋಚಿಗಳು ಹೆಚ್ಚಿನ ರನ್ ಕೊಡುಗೆ ನೀಡಲಿಲ್ಲ. ಅಂತಿಮವಾಗಿ ಭಾರತ 396 ರನ್ಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಆ್ಯಂಡರ್ಸನ್, ಶೋಯಬ್ ಬಶೀರ್ ಹಾಗೂ ರೆಹನ್ ಅಹ್ಮದ್ ತಲಾ 3 ಹಾಗೂ ಟಾಮ್ ಹಾರ್ಟ್ಲಿ 1 ವಿಕೆಟ್ ಕಬಳಿಸಿದರು.
ಬಳಿಕ, ಪ್ರಥಮ ಇನ್ನಿಂಗ್ಸ್ ಆಡಿದ ಆಂಗ್ಲರಿಗೆ ಜಾಕ್ ಕ್ರಾವ್ಲಿ (76) ಹಾಗೂ ಡಕೆಟ್ (21) 59 ರನ್ಗಳ ಉತ್ತಮ ಆರಂಭ ಒದಗಿಸಿದರು. ಈ ವೇಳೆ ಡಕೆಟ್ ಕುಲ್ದೀಪ್ ಬೌಲಿಂಗ್ನಲ್ಲಿ ಪಟಿದಾರ್ಗೆ ಕ್ಯಾಚ್ ನೀಡಿ ಹೊರನಡೆದರು. ಬಳಿಕ ಉತ್ತಮವಾಗಿ ಆಡುತ್ತಿದ್ದ ಕ್ರಾವ್ಲಿ ಶ್ರೇಯಸ್ ಅಯ್ಯರ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.