ರಾಂಚಿ(ಜಾರ್ಖಂಡ್):ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಇಂದಿನಿಂದ ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಷನಲ್ ಮೈದಾನದಲ್ಲಿ ಆರಂಭವಾಗಲಿದೆ. ಈಗಾಗಲೇ 5 ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿರುವ ರೋಹಿತ್ ಪಡೆ ಈ ಹಣಾಹಣಿ ಜಯಿಸಿ, ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇನ್ನೊಂದೆಡೆ, ಸರಣಿ ಜೀವಂತವಾಗಿರಿಸಿಕೊಳ್ಳಲು ಆಂಗ್ಲರಿಗೆ ಎಂ.ಎಸ್ ಧೋನಿ ತವರಿನಲ್ಲಿ ಗೆಲುವು ಅನಿವಾರ್ಯವಾಗಿದೆ.
ಈಗಾಗಲೇ ರಾಂಚಿ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡವು ಆಡುವ 11ರ ಬಳಗವನ್ನು ಘೋಷಣೆ ಮಾಡಿದೆ. ಮಧ್ಯಮ ವೇಗಿ ಆಲಿ ರಾಬಿನ್ಸನ್ ಮತ್ತು ಶೋಯೆಬ್ ಬಶೀರ್ ಅವರು ತಂಡಕ್ಕೆ ಮರಳಿದ್ದಾರೆ. ರಾಬಿನ್ಸನ್ ಮತ್ತು ಬಶೀರ್‌ಗಾಗಿ ರೆಹಾನ್ ಅಹ್ಮದ್ ಮತ್ತು ಮಾರ್ಕ್ ವುಡ್ ತಂಡದಿಂದ ಹೊರಗುಳಿಯಲಿದ್ದಾರೆ. ಈ ಎರಡು ಬದಲಾವಣೆ ಹೊರತುಪಡಿಸಿ, ಇಂಗ್ಲೆಂಡ್ ಉಳಿದಂತೆ ರಾಜ್‌ಕೋಟ್‌ನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿನ ಆಟಗಾರರನ್ನೇ ಮುಂದುವರೆಸಲಿದೆ.
ಬ್ಯಾಟಿಂಗ್ ವೈಫಲ್ಯ:ಅನುಭವಿ ಬ್ಯಾಟರ್ಗಳಾದ ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್ ವೈಫಲ್ಯವು ಆಂಗ್ಲರಿಗೆ ತಲೆನೋವು ಉಂಟುಮಾಡಿದೆ. ಕಳೆದ ಮೂರು ಪಂದ್ಯಗಳಲ್ಲೂ ಈ ಇಬ್ಬರೂ ಆಟಗಾರರು ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ವಿಫಲರಾಗಿದ್ದಾರೆ. ಬಾಜ್ಬಾಲ್ ಶೈಲಿಯ ಆಟವು ಇಬ್ಬರಿಗೂ ಕೈಕೊಟ್ಟಿದ್ದು, ನಾಲ್ಕನೇ ಪಂದ್ಯದಲ್ಲಾದರೂ ಫಾರ್ಮ್ಗೆ ಮರಳುತ್ತಾರಾ ಎಂಬುದನ್ನು ಕಾಯ್ದುನೋಡಬೇಕಿದೆ.
ಇನ್ನೊಂದೆಡೆ, ಸರಣಿಯಲ್ಲಿ 13.65 ಸರಾಸರಿಯಲ್ಲಿ 17 ವಿಕೆಟ್ ಕಬಳಿಸಿ ಆಂಗ್ಲರನ್ನು ಕಾಡಿರುವ ವೇಗಿ ಜಸ್ಪ್ರೀತ್ ಬುಮ್ರಾಗೆ ಈ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಬುಮ್ರಾ ಸ್ಥಾನಕ್ಕೆ ಮುಖೇಶ್ ಕುಮಾರ್ ಅಥವಾ ಬಂಗಾಳದ ವೇಗಿ ಆಕಾಶ್ ದೀಪ್ ಆಡುವ ಸಾಧ್ಯತೆಯಿದೆ. ಆದರೆ, ವಿಕೆಟ್‌ನ ಸ್ವರೂಪ ಗಮನಿಸಿದರೆ, ಭಾರತವು ಹೆಚ್ಚುವರಿ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ನಿರೀಕ್ಷೆಯೂ ಇದೆ.
ಜೊತೆಗೆ, ಕಳೆದೆರಡು ಪಂದ್ಯಗಳಲ್ಲಿ ನಿರಾಶಾದಾಯಕ ಆಟ ತೋರಿದ್ದ ರಜತ್ ಪಾಟಿದಾರ್ ಅವರು ಕೆಎಲ್ ರಾಹುಲ್ ಅನುಪಸ್ಥಿತಿಯಿಂದಾಗಿ ಮತ್ತೊಂದು ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳಿವೆ. ಪಾಟಿದಾರ್ ಎರಡು ಪಂದ್ಯಗಳಲ್ಲಿ ಅವರು 11.50ರ ಸರಾಸರಿಯಲ್ಲಿ ಕೇವಲ 46 ರನ್ ಗಳಿಸಿದ್ದಾರೆ. ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಮತ್ತೊಂದು ಅವಕಾಶ ಸಿಗಬಹುದಾಗಿದೆ.
ಕೆಎಸ್ ಭರತ್ ಸ್ಥಾನಕ್ಕೆ ಬಂದಿರುವ ಯುವ ಕೀಪರ್ ಧ್ರುವ ಜುರೆಲ್ ಬ್ಯಾಟಿಂಗ್ ಹಾಗೂ ಸ್ಟಂಪ್ ಹಿಂದಿನ ಕೈಚಳಕದಿಂದ ಗಮನ ಸೆಳೆದಿದ್ದಾರೆ. ಜೊತೆಗೆ ಕಳೆದ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ ಅರ್ಧಶತಕ ಬಾರಿಸಿರುವ ಸರ್ಫರಾಜ್ ಖಾನ್ ಕೂಡ ತಂಡದಲ್ಲಿ ಮುಂದುವರೆಯಲಿದ್ದಾರೆ. ರಾಂಚಿಯಲ್ಲಿ ಮತ್ತೊಂದು ಗೆಲುವಿನ ಮೂಲಕ ಸರಣಿ ತನ್ನದಾಗಿಸಿಕೊಳ್ಳಲು ಭಾರತ ಕಾದಾಡಲಿದ್ದು, ಸರಣಿ ಸಮಬಲಕ್ಕಾಗಿ ಇಂಗ್ಲೆಂಡ್ ಹೋರಾಡಲಿದೆ.