ಹೈದರಾಬಾದ್: ’’ಯಶಸ್ವಿ ಜೈಸ್ವಾಲ್ 'ಡಬಲ್' ಸೆಂಚುರಿ , ಸರ್ಫರಾಜ್ ಖಾನ್ ಡಬಲ್ ಫಿಫ್ಟಿ, ಧ್ರುವ ಜುರೆಲ್ ಬ್ಯಾಟಿಂಗ್, ಕೀಪಿಂಗ್ನಲ್ಲಿ ಮಿಂಚು.. ಇವರು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಗೆಲುವಿನ ರೂವಾರಿಗಳು. ಟೀಂ ಇಂಡಿಯಾದ ಇಂದಿನ ಪ್ರತಿಭೆಗಳು‘‘.
ಹೀಗೆಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ. ಜೊತೆಗೆ ತಾವು, ರವೀಂದ್ರ ಜಡೇಜಾ ಶತಕ ಮತ್ತು ಶುಭ್ಮನ್ ಗಿಲ್ ಅರ್ಧಶತಕದ ಹೊರತಾಗಿಯೂ ಗೆಲುವಿನ ಕ್ರೆಡಿಟ್ ಅನ್ನು ಈ ಮೂವರು ಯುವ ಆಟಗಾರರಿಗೆ ನೀಡಿದ್ದಾರೆ. ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಬಹುದೊಡ್ಡ ವಿಜಯ ಸಾಧಿಸಲು ಕಾರಣೀಭೂತರಾದ ಮೂವರು ಯುವ ಕ್ರಿಕೆಟಿಗರನ್ನು ರೋಹಿತ್ ಶರ್ಮಾ ಹಾಡಿ ಹೊಗಳಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಎರಡು ಫೋಟೋಗಳ ಕೊಲಾಜ್ ಅನ್ನು ಹಂಚಿಕೊಂಡು ಅದಕ್ಕೆ 'ಯೇ ಆಜ್ಕಲ್ ಕೆ ಬಚ್ಚೆ'(ಈ ದಿನದ ಹುಡುಗರು) ಎಂದು ಒಕ್ಕಣೆ ನೀಡಿದ್ದಾರೆ. ಜೈಸ್ವಾಲ್ ದ್ವಿಶತಕ ಸಂಭ್ರಮದಲ್ಲಿ ಸರ್ಫರಾಜ್ ಭಾಗಿಯಾಗಿರುವುದು, ಬೆನ್ ಡಕೆಟ್ರನ್ನು ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ಜುರೆಲ್ರ ಚಿತ್ರವುಳ್ಳ ಸ್ಟೋರಿ ಇದಾಗಿದೆ. ಇದಕ್ಕೆ ಅಭಿಮಾನಿಗಳು ಕೂಡ ಮೆಚ್ಚುಗೆ ಸೂಚಿಸಿದ್ದಾರೆ.