IND vs AUS 2nd Test: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಬಾರ್ಡರ್ - ಗವಾಸ್ಕರ್ ಟ್ರೋಫಿ ಭಾಗವಾಗಿ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈಗಾಗಲೇ ಪರ್ತ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 295 ರನ್ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿದ್ದ ಟೀಂ ಇಂಡಿಯಾ, ಇದೀಗ ಎರಡನೇ ಟೆಸ್ಟ್ಗೆ ಸಿದ್ದತೆ ಮಾಡಿಕೊಳ್ಳುತ್ತಿದೆ. 2ನೇ ಪಂದ್ಯ ಶುಕ್ರವಾರ (ನಾಳೆ) ನಡೆಯಲಿದೆ.
ಹಗಲು/ರಾತ್ರಿ (Day/Night) ಪಂದ್ಯವಾದ ಇದಕ್ಕೆ ಅಡಿಲೇಡ್ನ ಓವೆಲ್ ಮೈದಾನ ಆತಿಥ್ಯ ವಹಿಸಿಕೊಳ್ಳುತ್ತಿದೆ. ಮೊದಲ ಪಂದ್ಯದಿಂದ ಹೊರಗುಳಿದಿದ್ದ ಇಬ್ಬರು ಸ್ಟಾರ್ ಆಟಗಾರರು ತಂಡಕ್ಕೆ ಮರಳಲಿದ್ದಾರೆ. ಹೌದು, ಎರಡನೇ ಮಗುವಿಗೆ ತಂದೆಯಾದ ರೋಹಿತ್ ಶರ್ಮಾ ಮೊದಲ ಟೆಸ್ಟ್ನಿಂದ ಹೊರಗುಳಿದಿದ್ದರು. ಇವರ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ನಾಯಕ ಮತ್ತು ಬೌಲರ್ ಆಗಿ ತಂಡವನ್ನು ವಿಜಯಶಾಲಿಯಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಎರಡನೇ ಟೆಸ್ಟ್ಗೆ ರೋಹಿತ್ ಶರ್ಮಾ ಮರಳಲಿದ್ದಾರೆ.
ಮತ್ತೊಬ್ಬ ಆಟಗಾರ ಶುಭಮನ್ ಗಿಲ್ ನೆಟ್ನಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದ ವೇಳೆ ಹೆಬ್ಬರಳು ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಗಿಲ್ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಎರಡನೇ ಟೆಸ್ಟ್ಗೆ ಮರಳಲು ಫಿಟ್ ಆಗಿದ್ದಾರೆ ಎಂದು ವರದಿಯಾಗಿವೆ. ಮೊದಲ ಪಂದ್ಯದಲ್ಲಿ ರೋಹಿತ್ ಮತ್ತು ಶುಭಮನ್ ಗಿಲ್ ಅನುಪಸ್ಥಿತಿಯಿಂದಾಗಿ ತಂಡಕ್ಕೆ ಯುವ ಆಟಗಾರರಾದ ದೇವದತ್ ಪಡಿಕ್ಕಲ್ ಮತ್ತು ದ್ರುವ್ ಜುರೇಲ್ ಅವರನ್ನು ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ, ಈ ಇಬ್ಬರು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು.