Ind vs Aus 2nd Test:ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಟೀಂ ಇಂಡಿಯಾ ಗೆಲುವಿನೊಂದಿಗೆ ಪ್ರಾರಂಭಿಸಿದೆ. ನ.22ರಂದು ಪರ್ತ್ ಮೈದಾನದಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 295 ರನ್ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ ಬೃಹತ್ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಕಳಪೆ ಆರಂಭ ಪಡೆದಿದ್ದ ಟೀಂ ಇಂಡಿಯಾ, ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 150 ರನ್‌ಗಳಿಗೆ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಬಲಿಷ್ಟವಾಗಿ ಕಮ್ಬ್ಯಾಕ್ ಮಾಡಿದ್ದ ಭಾರತ, ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿ ಗೆಲುವು ಸಾಧಿಸಿತ್ತು.
ಇದೀಗ ಟೀಂ ಇಂಡಿಯಾ ಅಡಿಲೇಡ್ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದ್ರೆ ಈ ಮೈದಾನದಲ್ಲಿ ಭಾರತ ಇದುವರೆಗೂ ಆಡಿರುವ ಟೆಸ್ಟ್ಗಳಿಲ್ಲಿ ಕೆಲವು ಬಾರಿ ಮಾತ್ರ ಗೆಲುವು ಸಾಧಿಸಿದೆ.
ಭಾರತ ಗೆದ್ದ ಟೆಸ್ಟ್ ಪಂದ್ಯಗಳೆಷ್ಟು?:ಅಡಿಲೇಡ್ನಲ್ಲಿ ಭಾರತ ಈವರೆಗೂ ಒಟ್ಟು 13 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಕೇವಲ ಎರಡು ಬಾರಿ ಮಾತ್ರ ಗೆದ್ದಿದೆ. ಎಂಟು ಬಾರಿ ಸೋಲು ಮತ್ತು 3 ಬಾರಿ ಪಂದ್ಯಗಳು ಡ್ರಾಗೊಂಡಿವೆ.
ಮೊದಲ ಗೆಲುವು ಯಾವಾಗ?:ಭಾರತ ಮೊದಲ ಬಾರಿಗೆ ಅಡಿಲೇಡ್ನಲ್ಲಿ 2003ರಲ್ಲಿ ಐತಿಹಾಸಿಕ ಗೆಲುವು ಸಾಧಿಸಿತ್ತು. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತೀಯ ಬೌಲರ್ಗಳು 556 ರನ್ ಬಿಟ್ಟುಕೊಟ್ಟಿದ್ದರು. ಆದರೆ ಬ್ಯಾಟಿಂಗ್ನಲ್ಲಿ ಭಾರತೀಯರು ಉತ್ತಮ ಪ್ರದರ್ಶನ ನೀಡಿದ್ದರು. ಕನ್ನಡಿಗ ರಾಹುಲ್ ದ್ರಾವಿಡ್ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಬುತ ದ್ವಿಶತಕ (233) ಸಿಡಿಸಿದ್ದರೆ, ವಿವಿಎಸ್ ಲಕ್ಷ್ಮಣ್ 148 ರನ್ ಬಾರಿಸಿದ್ದರು.