ಬೆಂಗಳೂರು:ಹೊಡಿಬಡಿ ಕ್ರಿಕೆಟ್ನ ಸೊಬಗನ್ನ ಹೆಚ್ಚಿಸಲು ಜಾರಿಗೆ ತಂದಿದ್ದ 'ಇಂಪ್ಯಾಕ್ಟ್ ಪ್ಲೇಯರ್ ನಿಯಮ'ಕ್ಕೆ ಹಿರಿಯ ಕ್ರಿಕೆಟಿಗರು ತೀವ್ರ ಆಕ್ಷೇಪ ಎತ್ತುತ್ತಿದ್ದಾರೆ. ಇದು ಕ್ರಿಕೆಟ್ನ ರೋಚಕತೆಯನ್ನೇ ಹಾಳು ಮಾಡುತ್ತಿದೆ. ಪಂದ್ಯವನ್ನು ಒನ್ಸೈಡ್ ಮಾಡುತ್ತಿದೆ ಎಂಬುದು ಅವರ ಅಭಿಪ್ರಾಯ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಚಕಾರ ಎತ್ತಿದ್ದರು. ಇದು ಆಟಗಾರರ ಭವಿಷ್ಯಕ್ಕೆ ಮಾರಕವಾಗಿದೆ ಎಂದಿದ್ದರು. ಇದರ ಬೆನ್ನಲ್ಲೇ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಅವರು ಕೂಡ ಬದಲಿ ಆಟಗಾರನ ನಿಯಮವನ್ನು ಟೀಕಿಸಿದ್ದಾರೆ.
ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, "ಇಂಪ್ಯಾಕ್ಟ್ ಪ್ಲೇಯರ್ ನಿಯಮ ಕ್ರಿಕೆಟ್ನ ಸಮತೋಲಕ್ಕೆ ಅಡ್ಡಿಯಾಗಿದೆ. ಮನರಂಜನೆಯ ಕ್ರಿಕೆಟ್ನ ಒಂದು ಭಾಗವಾಗಿರಬೇಕು. ಅದು ಬಿಟ್ಟು ಆಟವೇ ಮನರಂಜನೆಯಾಗಬಾರದು. ಹಾಗಾದಲ್ಲಿ ಕ್ರಿಕೆಟ್ನ ಅಂತಃ ಸತ್ವ ಉಳಿಯುವುದಿಲ್ಲ" ಎಂದಿದ್ದಾರೆ.
"ರೋಹಿತ್ ಶರ್ಮಾ ಅವರ ಮಾತನ್ನು ನಾನು ಒಪ್ಪುತ್ತೇನೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದ ಆಟದಲ್ಲಿ ಸಮತೋಲನ ಉಳಿಯುತ್ತಿಲ್ಲ. ಇದು ಕ್ರಿಕೆಟಿಗರ ಭವಿಷ್ಯಕ್ಕೂ ಮಾರಕವಾಗಲಿದೆ. ಒಂದು ಇನಿಂಗ್ಸ್ ಆಡಿದ ಬಳಿಕ ಆತ, ಮೈದಾನ ತೊರೆಯಬೇಕು. ಆಲ್ರೌಂಡರ್ಗಳಿಗೆ ಇದು ಹೆಚ್ಚು ನಷ್ಟ ಉಂಟು ಮಾಡುತ್ತದೆ. ಇದು ನನ್ನಂತೆ ಹಲವು ಕ್ರಿಕೆಟಿಗರ ಅಭಿಪ್ರಾಯ" ಎಂದರು.
ಬೌಲರ್‌ಗಳ ಮೇಲೆ ಗದಾಪ್ರಹಾರ:8ನೇ ಕ್ರಮಾಂಕದವರೆಗೂ ಬ್ಯಾಟರ್ ಹೊಂದುವುದರಿಂದ ಬೌಲರ್‌ಗಳ ಭಾರಿ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಪ್ರತಿ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ರಶೀದ್ ಖಾನ್ರಂತಹ ಪ್ರಭಾವಿ ಬೌಲರ್ಗಳನ್ನು ಹೊಂದಲು ಸಾಧ್ಯವಿಲ್ಲ. ಇದರಿಂದ ಪ್ರತಿ ಎಸೆತದಲ್ಲೂ ಅವರ ದಂಡನೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.