ಬೆಂಗಳೂರು: 'ಸರ್ವ ಜನಾಂಗದ ಶಾಂತಿಯ ತೋಟ' ಥೀಮ್ ಅಡಿ ಈ ವರ್ಷ ಮಾರ್ಚ್ 1 ರಿಂದ 8 ರವರೆಗೆ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆ ಕುರಿತು ಪತ್ರಿಕಾಗೋಷ್ಠಿ ನಡೆಯಿತು. '16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1ರಿಂದ 8ರ ವರೆಗೆ ನಡೆಯಲಿದೆ. ಈ ವರ್ಷದ ಚಲನಚಿತ್ರೋತ್ಸವದ ಥೀಮ್ ʻಸರ್ವ ಜನಾಂಗದ ಶಾಂತಿಯ ತೋಟʼ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ʻಸಾಮಾಜಿಕ ನ್ಯಾಯʼ ಥೀಮ್ನಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗಿತ್ತು ಎಂದರು.
2006ರಲ್ಲಿ ಆರಂಭವಾದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೀಗ 16ನೇ ಆವೃತ್ತಿಗೆ ಪ್ರವೇಶಿಸುತ್ತಿದೆ. ಈ ಬಾರಿ 9 ಕೋಟಿ ರೂ ವೆಚ್ಚದಲ್ಲಿ ಚಲನಚಿತ್ರೋತ್ಸ ಆಯೋಜಿಸಲಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದು, ಬೆಂಗಳೂರು ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಿನೆಮಾ ಸಂಸ್ಕೃತಿಯ ಮುಖ್ಯ ಕೇಂದ್ರವಾಗಿ ಬೆಳೆದಿದೆ ಎಂದು ಸಿಎಂ ತಿಳಿಸಿದರು.
200ಕ್ಕೂ ಅಧಿಕ ಚಲನಚಿತ್ರ ಪ್ರದರ್ಶನ: ಚಲನಚಿತ್ರೋತ್ಸವದಲ್ಲಿ ಪ್ರತಿ ವರ್ಷ 60ಕ್ಕೂ ಹೆಚ್ಚು ದೇಶಗಳಿಂದ ಬಂದ ಸುಮಾರು 200ಕ್ಕೂ ಅಧಿಕ ಚಲನಚಿತ್ರಗಳನ್ನು, 13 ಚಿತ್ರಮಂದಿರಗಳಲ್ಲಿ ಸುಮಾರು 400 ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿ ಆವೃತ್ತಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಚಲಚಿತ್ರೋತ್ಸವಕ್ಕೆ ಯಾರನ್ನು ರಾಯಭಾರಿಯಾಗಿ ಆಯ್ಕೆ ಮಾಡಬೇಕು ಎಂಬುದನ್ನು ಸಮಿತಿ ನಿರ್ಧರಿಸಲಿದೆ. ಬೇರೆ ಚಿತ್ರಗಳೂ ಪ್ರದರ್ಶನ ಆಗಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯ ಸರ್ಕಾರ ಚಲನ ಚಿತ್ರೋತ್ಸವ ನಡೆಸಲಿದೆ. ಚಿತ್ರೋತ್ಸವಕ್ಕೆ 12 ಕೋಟಿ ರೂ. ಅನುದಾನ ಕೇಳಿದ್ದರು. ನಾನು 9 ಕೋಟಿ ರೂ.ಗೆ ಅನುಮತಿ ನೀಡಿದ್ದೇನೆ ಎಂದು ಸಿಎಂ ಹೇಳಿದರು.
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, ಶಾಸಕರು ಸೇರಿಕೊಂಡು ಸಭೆ ಮಾಡಿದರೆ ಅದನ್ನೇ ದೊಡ್ಡ ಸುದ್ದಿ ಮಾಡುತ್ತೀರಿ. ಅಲ್ಲಿ ರಾಜಕೀಯ ಮಾತನಾಡಿಲ್ಲ. ಊಟ ಮಾಡಿದ್ದೇವೆ ಅಷ್ಟೇ. ಪಕ್ಷ ಬಲವರ್ಧನೆಗೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ಮಾಧ್ಯಮದಲ್ಲಿ ಬರುವಂಥದ್ದು ಏನೂ ನಡೆದಿಲ್ಲ. ಹೊಸ ವರ್ಷದ ಪ್ರಯಕ್ತ ಊಟ ಮಾಡಿದ್ದೇವೆ. ಯಾರನ್ನ ಕರೆದಿದ್ದಾರೆಯೋ ಅವರು ಮಾತ್ರ ಊಟಕ್ಕೆ ಹೋಗಿದ್ದೇವೆ ಎಂದು ಇದೇ ವೇಳೆ, ಸಿಎಂ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ದರ್ಶನ್ ಸೇರಿ ಎಲ್ಲ ಆರೋಪಿಗಳ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ
ಇದನ್ನೂ ಓದಿ: ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ್: ಮದುವೆ ಸಂದರ್ಭವನ್ನು ಸಾರ್ಥಕಗೊಳಿಸಿದ ನಟ