ಧಾರವಾಡ: ''ಸಿ.ಟಿ.ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಧಾನ ಪರಿಷತ್ನಲ್ಲಿ ಪಂಚನಾಮೆ ಹೇಗೆ ಮಾಡುತ್ತೇವೆ ಎಂದು ಸಿಐಡಿ ತಿಳಿಸಿದರೆ ಅದಕ್ಕೆ ಅನುಮತಿಸುವ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ" ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ವಿಧಾನ ಪರಿಷತ್ನಲ್ಲಿ ಸ್ಥಳ ಮಹಜರು ಮಾಡಲು ನಾವು ಇನ್ನೂ ಅನುಮತಿ ಕೊಟ್ಟಿಲ್ಲ. ಪರಿಷತ್ನಲ್ಲಿ ಈ ಹಿಂದೆ ಯಾವತ್ತೂ ಹೀಗೆ ಆಗಿಲ್ಲ, ಈಗ ಆಗಿದೆ. ಏನು ಮಾಡಲು ಆಗುವುದಿಲ್ಲ, ಆಗಿದ್ದನ್ನು ಎದರುಸುತ್ತಿದ್ದೇವೆ" ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಬಗ್ಗೆ ಮಾತನಾಡಿದ ಅವರು, "ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮನವಿ ಕೊಟ್ಟಿದ್ದಾರೆ. ಈ ಸಂಬಂಧ ಸೆಕ್ರೆಟರಿ ಹಂತದಲ್ಲಿ ಸಭೆ ಮಾಡುತ್ತೇವೆ. ಸಭೆ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ. ಪ್ರಕರಣವನ್ನು ಸರ್ಕಾರ ಸಿಐಡಿಗೆ ತನಿಖೆಗೆ ಕೊಟ್ಟಿದೆ. ನಮ್ಮನ್ನು ಕೇಳಿ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಕೊಟ್ಟಿಲ್ಲ. ಸಿಐಡಿ ತನಿಖೆಗೂ ನಮಗೂ ಸಂಬಂಧ ಇಲ್ಲ. ಸಿ.ಟಿ. ರವಿ ಬಂಧನಕ್ಕೂ ಮುಂಚೆ ಬಂಧಿಸುತ್ತಿರುವುದಾಗಿ ತಿಳಿಸಬೇಕಿತ್ತು ಎಂದು ತಿಳಿಸಿದ್ದಾರೆ" ಎಂದರು.
"ಸಿಐಡಿ, ಪರಿಷತ್ನ ಒಳಗೆ ಹೇಗೆ ಪಂಚನಾಮೆ ಮಾಡುತ್ತದೆ ಎಂಬ ಬಗ್ಗೆ ಮಾಹಿತಿ ಬೇಕಲ್ವಾ, ಪಂಚನಾಮೆಯನ್ನು ಈ ರೀತಿ ಮಾಡುತ್ತೇವೆ ಎಂದು ತಿಳಿಸಬೇಕಲ್ವಾ ಅವರು. ಹೇಗೆ ಪಂಚನಾಮೆ ಮಾಡುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಮ್ಮಲ್ಲಿ ಯಾವುದೇ ರೆಕಾರ್ಡ್ ಇಲ್ಲ. ಹೇಗೆ ಪಂಚನಾಮೆ ಮಾಡುತ್ತೇವೆ ಎಂದು ಸಿಐಡಿ ತಿಳಿಸಿದ ಮೇಲೆ ಅವಶ್ಯಕತೆ ಇದೆಯೋ ಇಲ್ಲವೋ ಎಂದು ನೋಡಿಕೊಂಡು ಅನುಮತಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ" ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಇದನ್ನೂ ಓದಿ: ಬಿಜೆಪಿ ನಾಯಕರಿಂದ ಅವಾಚ್ಯ ಶಬ್ದ ಬಳಕೆ ಆರೋಪ: ಆರ್ಎಸ್ಎಸ್ ಕಚೇರಿಗೆ ಪತ್ರ ಬರೆದ ಕಾಂಗ್ರೆಸ್ ಕಾರ್ಯಕರ್ತರು