ICC Test Ranking: ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.
ಬುಮ್ರಾ 908 ರೇಟಿಂಗ್ ಪಾಯಿಂಟ್ಸ್ನೊಂದಿಗೆ ಮೊದಲ ಸ್ಥಾನ ಪಡೆದರೆ, ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ (841) ಎರಡನೇ ಸ್ಥಾನದಲ್ಲಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಮಿಂಚಿದ್ದ ವೇಗಿ ಸ್ಕಾಟ್ ಬೋಲ್ಯಾಂಡ್ 29 ಸ್ಥಾನಗಳಷ್ಟು ಜಿಗಿತ ಕಂಡು 9ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಇವರು 745 ರೇಟಿಂಗ್ ಪಾಯಿಂಟ್ಸ್ನೊಂದಿಗೆ ಜಡೇಜಾರೊಂದಿಗೆ ಜಂಟಿಯಾಗಿ ಒಂಬತ್ತನೇ ಸ್ಥಾನಿಯಾಗಿದ್ದಾರೆ.
ಟೆಸ್ಟ್ ಟಾಪ್ 5 ಬೌಲರ್‌ಗಳು:
- ಜಸ್ಪ್ರೀತ್ ಬುಮ್ರಾ (ಭಾರತ) - 908 ರೇಟಿಂಗ್ ಪಾಯಿಂಟ್ಸ್
- ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ) - 841 ರೇಟಿಂಗ್ ಪಾಯಿಂಟ್ಸ್
- ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ) - 837 ರೇಟಿಂಗ್ ಪಾಯಿಂಟ್ಸ್
- ಜೋಶ್ ಹ್ಯಾಜಲ್‌ವುಡ್ (ಆಸ್ಟ್ರೇಲಿಯಾ) - 835 ರೇಟಿಂಗ್ ಪಾಯಿಂಟ್ಸ್
- ಮಾರ್ಕೊ ಜಾನ್ಸನ್ (ದಕ್ಷಿಣ ಆಫ್ರಿಕಾ) - 785 ರೇಟಿಂಗ್ ಪಾಯಿಂಟ್ಸ್
ಬ್ಯಾಟಿಂಗ್‌ನಲ್ಲಿ ರಿಷಬ್ ಪಂತ್ 739 ರೇಟಿಂಗ್ ಪಾಯಿಂಟ್ಸ್ ಪಡೆದು ಮೂರು ಸ್ಥಾನಗಳಷ್ಟು ಏರಿಕೆ ಕಂಡು ಅಗ್ರ 9ನೇ ಸ್ಥಾನಕ್ಕೆ ಏರಿದ್ದಾರೆ. ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ 847 ಪಾಯಿಂಟ್ಸ್ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ತೆಂಬಾ ಬವುಮಾ (769) 6ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಜೋ ರೂಟ್ (895) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.