ಕರ್ನಾಟಕ

karnataka

ETV Bharat / sports

ಏಕದಿನ, ಟಿ20 ಕ್ರಿಕೆಟ್​ನಲ್ಲಿ ಸಮಯ ವ್ಯರ್ಥ ತಡೆಯಲು 'ಸ್ಟಾಪ್ ಕ್ಲಾಕ್'​: ಏನಿದು ನಿಯಮ? ​

ಏಕದಿನ ಮತ್ತು ಟಿ20ಯಲ್ಲಿ ಸಮಯ ವ್ಯರ್ಥವನ್ನು ತಡೆಯಲು ಐಸಿಸಿ 'ಸ್ಟಾಪ್​ ಕ್ಲಾಕ್'​ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

ಏಕದಿನ, ಟಿ20 ಕ್ರಿಕೆಟ್​ಗಳಲ್ಲಿ ಸಮಯ ವ್ಯರ್ಥ ತಡೆಯಲು 'ಸ್ಟಾಪ್ ಕ್ಲಾಕ್'​ ಜಾರಿಗೆ ಐಸಿಸಿ ಸಿದ್ದ​
ಏಕದಿನ, ಟಿ20 ಕ್ರಿಕೆಟ್​ಗಳಲ್ಲಿ ಸಮಯ ವ್ಯರ್ಥ ತಡೆಯಲು 'ಸ್ಟಾಪ್ ಕ್ಲಾಕ್'​ ಜಾರಿಗೆ ಐಸಿಸಿ ಸಿದ್ದ​

By ETV Bharat Karnataka Team

Published : Mar 16, 2024, 12:19 PM IST

ನವದೆಹಲಿ:ಏಕದಿನ (ODI) ಮತ್ತು ಟಿ20 ಕ್ರಿಕೆಟ್‌ಗಳಲ್ಲಿ ತಂಡಗಳು ಸಮಯ ವ್ಯರ್ಥ ಮಾಡುವುದನ್ನು ತಡೆಯಲು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ​ (ICC) 'ಸ್ಟಾಪ್​ ಕ್ಲಾಕ್​' ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಡಿಸೆಂಬರ್ 2023ರಲ್ಲಿ ಈ ಸ್ಟಾಪ್ ಕ್ಲಾಕ್ ನಿಯಮವನ್ನು ಪರಿಚಯಿಸಲಾಗಿತ್ತು. ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದ್ದು, ಜೂನ್‌ನಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ನಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಐಸಿಸಿ ಪ್ರಕಟಿಸಿದೆ.

ಏನಿದು ಸ್ಟಾಪ್​ ಕ್ಲಾಕ್​;ಈ ನಿಯಮದ ಪ್ರಕಾರ ಫೀಲ್ಡಿಂಗ್​ ಮಾಡುತ್ತಿರುವ ತಂಡವು ಹಿಂದಿನ ಓವರ್​​ ಮುಗಿಸಿ 60 ಸೆಕೆಂಡ್​ಗಳೊಳಗೆ ಹೊಸ ಓವರ್​ ಅನ್ನು ಆರಂಭಿಸಬೇಕು. ಒಂದು ವೇಳೆ ಈ ಸಮಯದೊಳಗೆ ಹೊಸ ಓವರ್​ ಆರಂಭಿಸುವಲ್ಲಿ ತಂಡ ವಿಫವಾದರೆ ಎರಡು ಬಾರಿ ಎಚ್ಚರಿಕೆಯನ್ನು ನೀಡಲಾಗುತ್ತದೆ. ಬಳಿಕ ಪ್ರತಿ ಸಮಯ ಉಲ್ಲಂಘನೆಗೆ 5 ರನ್​ಗಳ ದಂಡವನ್ನು ವಿಧಿಸಲಾಗುತ್ತದೆ. ಇದರಿಂದ ಎದುರಾಳಿ ತಂಡದ ಸ್ಕೋರ್​ಗೆ ಈ 5ರನ್​ ಸೇರ್ಪಡೆಯಾಗುತ್ತದೆ. ಓವರ್​ ಪೂರ್ಣಗೊಳ್ಳತ್ತಿದ್ದಂತೆ ಮೈದಾನದಲ್ಲಿ ಅಳವಡಿಸಿರುವ ದೊಡ್ಡ ಪರದೆಯಲ್ಲಿ ಈ ಟೈಮ್​ ಕೌಂಟಿಂಗ್​ ಆರಂಭಗೊಳ್ಳತ್ತದೆ. ಮೂರನೇ ಅಂಪೈರ್ ಕ್ಲಾಕ್​ನ ಆರಂಭವನ್ನು​ ನಿರ್ಧರಿಸಲಿದ್ದಾರೆ. ಇದರಿಂದ ಪ್ರತಿ ಪಂದ್ಯಗಳಲ್ಲಿ 20 ನಿಮಿಷಗಳ ಉಳಿತಾಯವಾಗಲಿದೆ ಎಂದು ಐಸಿಸಿ ತಿಳಿಸಿದೆ.

ಯಾವುದಕ್ಕೆಲ್ಲ ವಿನಾಯಿತಿ:ಆದಾಗ್ಯೂ, ಐಸಿಸಿ ಈ ನಿಯಮಕ್ಕೆ ಕೆಲವು ವಿನಾಯಿತಿಗಳನ್ನು ಸಹ ಸೇರಿಸಿದೆ. ಅಂತಹ ಸಂದರ್ಭಗಳಲ್ಲಿ ಈ ಸಮಯವನ್ನು ರದ್ದುಗೊಳಿಸಲಾಗುತ್ತದೆ. ಇದು ಬ್ಯಾಟ್ಸ್‌ಮನ್ ಅಥವಾ ಫೀಲ್ಡರ್‌ ಗಾಯಗೊಂಡ ಸಂದರ್ಭದಲ್ಲಿ, ಮೈದಾನದ ಚಿಕಿತ್ಸೆ ಕೊಡುವ ವೇಳೆ, ಬ್ಯಾಟ್ಸ್‌ಮನ್ ಕ್ರೀಸ್‌ಗೆ ಬರುವಾಗ ಮತ್ತು ಡ್ರಿಂಕ್ಸ್ ಬ್ರೇಕ್ ವೇಳೆ ಸಮಯವನ್ನು ರದ್ದುಗೊಳಿಸಲಾಗುತ್ತದೆ. ಫೀಲ್ಡಿಂಗ್ ತಂಡದ ನಿಯಂತ್ರಣಕ್ಕೆ ಮೀರಿದ ಕೆಲ ಸಂದರ್ಭಗಳಲ್ಲೂ ಸಮಯ ಕಳೆದುಹೋದರೆ ಆಗಲೂ ಈ ವಿನಾಯಿತಿ ಅನ್ವಯಿಸಲಿದೆ ಎಂದು ಐಸಿಸಿ ಹೇಳಿದೆ.

ಫೀಲ್ಡಿಂಗ್ ತಂಡಗಳು ಸಾಮಾನ್ಯವಾಗಿ ಪಂದ್ಯದ ವೇಗವನ್ನು ನಿಧಾನಗೊಳಿಸಲು ಪ್ರಯತ್ನಿಸುತ್ತವೆ, ಇದರಿಂದಾಗಿ ಅವರು ಕಾರ್ಯತಂತ್ರವನ್ನು ರೂಪಿಸಲು ಹೆಚ್ಚಿನ ಸಮಯ ಸಿಕ್ಕಂತಾಗುತ್ತದೆ. ಅಲ್ಲದೆ ತಂಡಗಳು ಪ್ರತಿ ಎಸೆತದ ನಂತರ ಫೀಲ್ಡಿಂಗ್ ಬದಲಾವಣೆಗೂ ಅವಕಾಶ ಸಿಕ್ಕಂತಾಗುತ್ತದೆ. ಈ ಹಿಂದೆ ಸಮಯ ಮೀರಿ ಪಂದ್ಯ ನಡೆದಾಗ ತಂಡ ಮತ್ತು ನಾಯಕನಿಗೆ ದಂಡ ವಿಧಿಸಲಾಗುತ್ತಿತ್ತು. ಆದರೆ ಇದು ಸಮಯ ವ್ಯರ್ಥವನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿರಲಿಲ್ಲ.

2024 ರ ಟಿ20 ವಿಶ್ವಕಪ್ ಜೂನ್ 2 ರಂದು ಪ್ರಾರಂಭವಾಗಿ ಜೂನ್ 29 ರಂದು ಕೊನೆಗೊಳ್ಳಲಿದೆ. ಎರಡೂ ಸೆಮಿಸ್ ಪಂದ್ಯಗಳು 27 ರಂದು ನಡೆದರೆ, ಫೈನಲ್ 29 ರಂದು ಜರುಗಲಿದೆ.

ಇದನ್ನೂ ಓದಿ:WPL 2024 : ಮುಂಬೈ ಇಂಡಿಯನ್ಸ್ ಮಣಿಸಿ ಫೈನಲ್​ಗೆ ಲಗ್ಗೆ ಇಟ್ಟ ಬೆಂಗಳೂರು ವನಿತೆಯರು​

ABOUT THE AUTHOR

...view details