Champions Trophy 2025:ಇದೇ ತಿಂಗಳಿನಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗಲಿದೆ. ಭಾರತ ಸೇರಿ 8 ತಂಡಗಳು ಟ್ರೋಫಿಗಾಗಿ ಸೆಣಸಲಿವೆ. ಫೆ. 20 ರಿಂದ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಪ್ರಾರಂಭಿಸಲಿದೆ. ಫೆಬ್ರವರಿ 19 ರಿಂದ ಪಾಕಿಸ್ತಾನ ಮತ್ತು ದುಬೈನಲ್ಲಿ ಪಂದ್ಯಗಳು ನಡೆಯಲಿವೆ. ಟೀಮ್ ಇಂಡಿಯಾ ತನ್ನೆಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.
ಏತನ್ಮಧ್ಯೆ, ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್ ತಲುಪುವ ತಂಡಗಳು ಯಾವುವು ಎಂಬುದರ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶೋಯೆಬ್ ಅಖ್ತರ್ ಭವಿಷ್ಯ ನುಡಿದಿದ್ದಾರೆ. ಈ ಬಾರಿಯ ಐಸಿಸಿ ಟೂರ್ನಿಯಲ್ಲಿ ಏಷ್ಯಾದ ಮೂರು ದೇಶಗಳು ಸೆಮಿಫೈನಲ್ ತಲುಪಲಿವೆ ಎಂದು ಹೇಳಿದ್ದಾರೆ. 2017ರ ಫೈನಲಿಸ್ಟ್ ತಂಡಗಳು ಮತ್ತೊಮ್ಮೆ ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ ಎಂದಿದ್ದಾರೆ.
ಆಸ್ಟ್ರೇಲಿಯಾಗಿಲ್ಲ ಅವಕಾಶ :"ಈ ಬಾರಿಯ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಪಾಕಿಸ್ತಾನ ಮತ್ತು ಭಾರತದೊಂದಿಗೆ ಅಫ್ಘಾನಿಸ್ತಾನವು ಅಗ್ರ 3 ತಂಡಗಳಾಗಿ ಸೆಮಿಸ್ ತಲುಪಲಿವೆ ಎಂದು ರಾವಲ್ಪಿಂಡಿ ಎಕ್ಸ್‌ಪ್ರೆಸ್ ಹೇಳಿದ್ದಾರೆ. ಆದಾಗ್ಯೂ, 2023ರ ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ನಾಲ್ಕನೇ ತಂಡವಾಗಿ ಸೆಮಿಸ್ಗೆ ಪ್ರವೇಶಿಸಲಿದೆ ಎಂದು ಹೆಚ್ಚಿನ ವಿಶ್ಲೇಷಕರ ಅಭಿಪ್ರಾಯಗಳ ಹೊರತಾಗಿಯೂ, ಅಖ್ತರ್ ಇದನ್ನು ತಳ್ಳಿಹಾಕಿದ್ದಾರೆ. ನಾಲ್ಕನೇ ತಂಡ ಯಾವುದು ಎಂದು ಅವರು ಹೆಸರಿಸಿಲ್ಲ.
ಮುಂದುವರೆದು ಮಾತನಾಡುತ್ತ, ಈ ಬಾರಿ ಭಾರತದ ಮೇಲೆ ಪಾಕಿಸ್ತಾನ ಮೇಲುಗೈ ಸಾಧಿಸಲಿದೆ ಎಂದಿದ್ದಾರೆ. ಫೆಬ್ರವರಿ 23 ರಂದು ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ, ಭಾರತವನ್ನು ಸೋಲಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಬಾರಿಯೂ ಈ ಎರಡೂ ತಂಡ ಫೈನಲ್ ತಲುಪುತ್ತವೆ. 2017 ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಂತೆ ಈ ಬಾರಿಯೂ ಭಾರತ ಮತ್ತು ಪಾಕಿಸ್ತಾನ ಪ್ರಶಸ್ತಿಗಾಗಿ ಮುಖಾಮುಖಿಯಾಗುತ್ತವೆ ಎಂದಿದ್ದಾರೆ.