ಹೈದರಾಬಾದ್: ಮುಂಬರುವ ಟಿ20 ವಿಶ್ವಕಪ್ನಲ್ಲಿ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಇಂದು ಬಿಡುಗಡೆ ಮಾಡಿದೆ. ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯದಲ್ಲಿ ಜೂನ್ 2 ರಿಂದ ಟಿ20 ವಿಶ್ವಕಪ್ ಟೂರ್ನಿಗಳು ಆರಂಭವಾಗಲಿದ್ದು, ಭಾರತ ಸೇರಿ ಹಲವು ದೇಶಗಳ ತಾರಾ ಕಾಮೆಂಟೇಟರ್ಗಳನ್ನು ಐಸಿಸಿ ಹೆಸರಿಸಿದೆ. ಪಟ್ಟಿಯಲ್ಲಿ ಮಾಜಿ ಟಿ20 ಚಾಂಪಿಯನ್ ದಿನೇಶ್ ಕಾರ್ತಿಕ್ ಅವರ ಹೆಸರು ಕೂಡ ಇದೆ.
ರವಿಶಾಸ್ತ್ರಿ, ನಾಸರ್ ಹುಸೇನ್, ಇಯಾನ್ ಸ್ಮಿತ್, ಮೆಲ್ ಜೋನ್ಸ್, ಹರ್ಷಾ ಭೋಗ್ಲೆ ಮತ್ತು ಇಯಾನ್ ಬಿಷಪ್ ಅವರಂತಹ ದಿಗ್ಗಜರು ಕಾಮೆಂಟರಿ ತಂಡವನ್ನು ಮುನ್ನಡೆಸಲಿದ್ದಾರೆ. ಹೆಚ್ಚುವರಿಯಾಗಿ, ಮಾಜಿ ಟಿ20 ಚಾಂಪಿಯನ್ಗಳಾದ ದಿನೇಶ್ ಕಾರ್ತಿಕ್, ಸ್ಯಾಮ್ಯುಯೆಲ್ ಬದ್ರಿ, ಕಾರ್ಲೋಸ್ ಬ್ರಾಥ್‌ವೈಟ್, ಸ್ಟೀವ್ ಸ್ಮಿತ್, ಆರನ್ ಫಿಂಚ್ ಕಾಮೆಂಟೇಟರ್ಗಳ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ.
ಮಹಿಳಾ ವಿಭಾಗದಿಂದ ಲಿಸಾ ಸ್ಥಾಲೇಕರ್ ಮತ್ತು ಎಬೊನಿ ರೈನ್‌ಫೋರ್ಡ್-ಬ್ರೆಂಟ್ ಕೂಡ ಹಾಜರಿರಲಿದ್ದಾರೆ. ಮಾಜಿ ಏಕದಿನ ವಿಶ್ವಕಪ್ ವಿಜೇತರಾದ ರಿಕಿ ಪಾಂಟಿಂಗ್, ಸುನಿಲ್ ಗವಾಸ್ಕರ್, ಮ್ಯಾಥ್ಯೂ ಹೇಡನ್, ರಮಿಜ್ ರಾಜಾ, ಇಯಾನ್ ಮಾರ್ಗನ್, ಟಾಮ್ ಮೂಡಿ ಮತ್ತು ವಾಸಿಮ್ ಅಕ್ರಮ್ ಕೂಡ ತಮ್ಮ ಪರಿಣಿತ ವಿಶ್ಲೇಷಣೆಯನ್ನು ನೀಡಲಿದ್ದಾರೆ. ಜಾಮ್ಬಾಯ್ ಎಂದು ಪ್ರಸಿದ್ಧರಾಗಿರುವ ಅಮೆರಿಕನ್ ನಿರೂಪಕ ಜೇಮ್ಸ್ ಒ’ಬ್ರೇನ್ ಎಂಬುವರು ಕೂಡ ಕಾಣಿಸಿಕೊಳ್ಳಲಿದ್ದಾರೆ.