ಎರ್ನಾಕುಲಂ(ಕೇರಳ): ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಇಂದು ತವರಿಗೆ ಆಗಮಿಸಿದ ಹಾಕಿ ದಿಗ್ಗಜ ಪಿ.ಆರ್.ಶ್ರೀಜೇಶ್ ಅವರಿಗೆ ಹುಟ್ಟೂರಿನಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಎರ್ನಾಕುಲಂ ಜಿಲ್ಲಾಧಿಕಾರಿ, ಶಾಸಕರು ಮತ್ತು ವಿದ್ಯಾರ್ಥಿಗಳು ನೆಡುಂಬಶ್ಶೇರಿ ವಿಮಾನ ನಿಲ್ದಾಣಕ್ಕೆ ಕುಟುಂಬ ಸಮೇತವಾಗಿ ಆಗಮಿಸಿ ದೆಹಲಿಯಿಂದ ಆಗಮಿಸಿದ ಶ್ರೀಜೇಶ್ ಅವರನ್ನು ಚಪ್ಪಾಳೆಯೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಕುರಿತು ಸಂತಸ ವ್ಯಕ್ತಪಡಿಸಿದ ಶ್ರೀಜೇಶ್, ತವರೂರಿನಲ್ಲಿ ನಿರೀಕ್ಷೆಗೂ ಮೀರಿ ಸ್ವಾಗತ ಸಿಕ್ಕಿದೆ ಎಂದರು. ಮುಂದುವರೆದು, ಕೇರಳದಲ್ಲಿ ಹಾಕಿ ಸಂಬಂಧಿತ ಮೂಲಸೌಕರ್ಯಗಳ ಹೆಚ್ಚಿಸುವ ಬಗ್ಗೆ ಒತ್ತಿ ಹೇಳಿದರು. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡುತ್ತೇನೆ. ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಹಾಕಿ ಮೈದಾನ ಇರಬೇಕು ಎಂದು ಹೇಳಿದರು.
ತೆರೆದ ಕಾರಿನಲ್ಲಿ ರೋಡ್ ಶೋ:ಬಳಿಕ ವಿಮಾನ ನಿಲ್ದಾಣದಿಂದ ಶ್ರೀಜೇಶ್ ಅವರನ್ನು ತೆರೆದ ಕಾರಿನಲ್ಲಿ ಕುನ್ನತುನಾಡಿಯಲ್ಲಿನ ತಮ್ಮ ಮನೆಯವರೆಗೆ ರೋಡ್ ಶೋ ಮೂಲಕ ಕರೆತರಲಾಯಿತು. ದಾರಿಯುದ್ದಕ್ಕೂ ನೆರೆದಿದ್ದ ಜನರು ಹೂ ಮಳೆಗೈದರು. ನಂತರ ಆಲುವಾ ಯುಸಿ ಕಾಲೇಜಿನಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ಶ್ರೀಜೇಶ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. 36ರ ಹರೆಯದ ಅಥ್ಲೀಟ್, ಆತ್ಮಸ್ಥೈರ್ಯದಿಂದ ಮುನ್ನಡೆಯುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.