ಸಿಡ್ನಿ (ಆಸ್ಟ್ರೇಲಿಯಾ) : ರನ್ ಗಳಿಸಲು ತಿಪ್ಪರಲಾಗ ಹಾಕುತ್ತಿರುವ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದಾರಾ? ಇಂಥದ್ದೊಂದು ವದಂತಿ ಕ್ರಿಕೆಟ್ ವಲಯದಲ್ಲಿ ಹಬ್ಬಿದೆ. ಆಸ್ಟ್ರೇಲಿಯಾ ವಿರುದ್ಧದ 5ನೇ ಮತ್ತು ಕೊನೆಯ ಟೆಸ್ಟ್‌ನಿಂದ ಅವರು ಹೊರಬಿದ್ದಿರುವುದು ಈ ವದಂತಿಗೆ ಕಾರಣವಾಗಿದೆ.
ಆಸೀಸ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಭಾರತ ಕ್ರಿಕೆಟ್ ತಂಡದಲ್ಲಿ ಪ್ರತಿ ಪಂದ್ಯದಲ್ಲೂ ಬದಲಾವಣೆ ಮಾಡಲಾಗುತ್ತಿದೆ. ಸಿಡ್ನಿಯ ಐದನೇ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಟ್ಟು ಶುಭ್ಮನ್ ಗಿಲ್ಗೆ ಅವಕಾಶ ನೀಡಲಾಗಿದೆ. ರೋಹಿತ್ ಬ್ಯಾಟ್ನಿಂದ ರನ್ಗಳು ಸಿಡಿಯುತ್ತಿಲ್ಲವಾದ ಕಾರಣ, ಅವರು ದೀರ್ಘ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾಗಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.
ನಿವೃತ್ತಿ ವದಂತಿ ನಿರಾಕರಿಸಿದ ರೋಹಿತ್ : ತಮ್ಮ ನಿವೃತ್ತಿ ವದಂತಿಯನ್ನು ಶನಿವಾರ ಸ್ಪಷ್ಟವಾಗಿ ನಿರಾಕರಿಸಿರುವ ಹಿರಿಯ ಬ್ಯಾಟರ್ ರೋಹಿತ್ ಶರ್ಮಾ ಅವರು, "ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್‌ನಿಂದ ಕಳಪೆ ಫಾರ್ಮ್ ಕಾರಣದಿಂದಾಗಿ ಪಂದ್ಯದಿಂದ ಹಿಂದೆ ಸರಿದಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.
"ನಾನು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಪಡೆದಿಲ್ಲ. ಈ ಪಂದ್ಯದಿಂದ ಹೊರಗುಳಿದಿದ್ದೇನೆ. ರನ್ ಗಳಿಸಲು ಸಾಧ್ಯವಾಗುತ್ತಿಲ್ಲ. ನಾನು ಲಯದಲ್ಲಿ ಇಲ್ಲ. ಇದು ಭಾರತಕ್ಕೆ ಮಹತ್ವದ ಪಂದ್ಯವಾಗಿರುವ ಕಾರಣ, ಫಾರ್ಮ್ನಲ್ಲಿ ಇರುವ ಆಟಗಾರ ತಂಡಕ್ಕೆ ಬೇಕಾಗಿದೆ. ಹೀಗಾಗಿ, ನಾನು ಹಿಂದೆ ಸರಿಯಲು ನಿರ್ಧರಿಸಿದೆ. ಈ ಬಗ್ಗೆ ತಂಡದ ಕೋಚ್ ಮತ್ತು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದೇನೆ" ಎಂದು ರೋಹಿತ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
"ಪಂದ್ಯದಿಂದ ಹಿಂದೆ ಸರಿಯಲು ಬಯಸಿದಾಗ ಕೋಚ್ ಮತ್ತು ತಂಡ ನನ್ನನ್ನು ಬೆಂಬಲಿಸಿತು. ಇದು ಕಠಿಣ ನಿರ್ಧಾರವಾದರೂ, ತಂಡಕ್ಕಾಗಿ ಇದು ಮುಖ್ಯವಾಗಿದೆ. ನಾನು ಈ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಪಂದ್ಯ ಗೆಲ್ಲಬೇಕು ಎಂಬುದು ನಮ್ಮ ಗುರಿ" ಎಂದರು.
ಕಾಯಂ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಪಡೆದ ಕಾರಣ, ಬೌಲಿಂಗ್ ಟ್ರಂಪ್ ಕಾರ್ಡ್ ಜಸ್ಪ್ರೀತ್ ಬುಮ್ರಾಗೆ ನಾಯಕತ್ವದ ಹೊಣೆ ನೀಡಲಾಗಿದೆ. ಇವರ ನಾಯಕತ್ವದಲ್ಲಿ ತಂಡವು ಯಶಸ್ಸು ಸಾಧಿಸಿದಲ್ಲಿ, ಬುಮ್ರಾ ಕಾಯಂ ನಾಯಕನಾಗಿ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಶಾಕಿಂಗ್ ನ್ಯೂಸ್!: ವೈಟ್ಬಾಲ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಭಾರತೀಯ ಕ್ರಿಕೆಟರ್!