ಆಂಟ್ವೆರ್ಪ್ (ಬೆಲ್ಜಿಯಂ):ಭಾರತೀಯ ಪುರುಷರ ಹಾಕಿ ತಂಡವು ಶುಕ್ರವಾರ ಎಫ್‌ಐಎಚ್ ಹಾಕಿ ಪ್ರೊ ಲೀಗ್ 2023-24 ರ ಯುರೋಪಿಯನ್ ಹಂತದ ತನ್ನ ಎರಡನೇ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 1-4 ಗೋಲುಗಳಿಂದ ಸೋತಿದೆ. ಭಾರತದ ಪರ ಅಭಿಷೇಕ್ (55') ಏಕೈಕ ಗೋಲು ದಾಖಲಿಸಿದರೆ, ಬೆಲ್ಜಿಯಂ ಪರ ಫೆಲಿಕ್ಸ್ ಡೆನಾಯರ್ (22'), ಅಲೆಕ್ಸಾಂಡರ್ ಹೆಂಡ್ರಿಕ್ಸ್ (34', 60') ಮತ್ತು ಸೆಡ್ರಿಕ್ ಚಾರ್ಲಿಯರ್ (49') ಅದ್ಭುತ ಗೋಲು ಗಳಿಸಿ ಮಿಂಚಿದರು.
ಪಂದ್ಯದ ಆರಂಭದಿಂದಲೇ ಬೆಲ್ಜಿಯಂ ಉತ್ತಮ ಪ್ರದರ್ಶನ ನೀಡುತ್ತಲೇ ಸಾಗುತ್ತಿತ್ತು. ಇದರಿಂದ ಭಾರತ ತಂಡಕ್ಕೆ ಹೆಚ್ಚು ಅಪಾಯಕಾರಿ ಎನಿಸಿತು. ಆದರೂ ಅವರು ಬಲವಾದ ಭಾರತೀಯ ರಕ್ಷಣಾತ್ಮಕ ಘಟಕವನ್ನು ಎದುರಿಸಿದರು, ಅದು ಒತ್ತಡದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿತು. ಮೊದಲ ಕ್ವಾರ್ಟರ್‌ನ ಸಮಯದ ನಂತರ ಭಾರತ ತಂಡವು ಕೆಲವು ದಾಳಿಗಳನ್ನು ಪ್ರಾರಂಭಿಸಿತು. ಬಳಿಕ ಎರಡೂ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ ಮತ್ತು ಮೊದಲ ಕ್ವಾರ್ಟರ್ 0-0 ಕೊನೆಗೊಂಡಿತು.
ಇದಾದ ಬಳಿಕ ಎರಡನೇ ಕ್ವಾರ್ಟರ್‌ಗೆ ಉಭಯ ತಂಡಗಳು ಶುಭಾರಂಭ ಮಾಡಿದವು. ಕ್ವಾರ್ಟರ್‌ನ ಮೊದಲ 3 ನಿಮಿಷಗಳಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಆದರೆ ಹರ್ಮನ್‌ಪ್ರೀತ್ ಅವರ ಹೊಡೆತವನ್ನು ಬೆಲ್ಜಿಯಂ ಗೋಲ್‌ಕೀಪರ್ ಸಖತ್ ಆಗಿ ಕ್ಯಾಚ್ ಮಾಡಿದರು. ಇದರಿಂದ ಭಾರತಕ್ಕೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೂ 8 ನಿಮಿಷಗಳು ಬಾಕಿ ಇರುವಾಗ, ಫೆಲಿಕ್ಸ್ ಡೆನಾಯರ್ (22') ಅವರು ಗೋಲ್ ಬಾರಿಸಿ ಬೆಲ್ಜಿಯಂಗೆ 1–0 ಮುನ್ನಡೆ ತಂದುಕೊಟ್ಟರು. ಪದೇ ಪದೇ ದಾಳಿ ನಡೆಸಿದರೂ ಪಂದ್ಯದ ಅರ್ಧದ ಆಟದಲ್ಲಿ ಭಾರತಕ್ಕೆ ಸಮಬಲ ಸಾಧಿಸಲು ಸಾಧ್ಯವಾಗಲಿಲ್ಲ.