ನವದೆಹಲಿ:2024ರ ಮಹಿಳಾ ಪ್ರೀಮಿಯರ್ ಲೀಗ್‌ನಿಂದ(ಡಬ್ಲ್ಯೂಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಸ್ಟಾರ್ ಆಲ್‌ರೌಂಡರ್ ಹೀದರ್ ನೈಟ್ ಹೊರನಡೆದಿದ್ದಾರೆ. ಈ ಬಗ್ಗೆ ಹೀದರ್ ನೈಟ್ ಯಾವುದೇ ಸೂಕ್ತ ಕಾರಣ ನೀಡಿಲ್ಲ. ಬದಲಿ ಆಟಗಾರ್ತಿಯಾಗಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ನಾಡಿನ್ ಡಿ ಕ್ಲರ್ಕ್ ಅವರನ್ನು ಕರೆತಂದಿರುವ ಬಗ್ಗೆ ಆರ್ಸಿಬಿ ತಿಳಿಸಿದೆ.
ಭಾರತದಲ್ಲಿ ಫೆಬ್ರವರಿ 23ರಿಂದ ಮಾರ್ಚ್ 17ವರೆಗೆ ಡಬ್ಲ್ಯೂಪಿಎಲ್ನ ಎರಡನೇ ಆವೃತ್ತಿ ನಡೆಯಲಿದೆ. ಈ ಆವೃತ್ತಿಯಲ್ಲಿ ನೈಟ್, ಆರ್ಸಿಬಿ ತಂಡ ಪ್ರತಿನಿಧಿಸಬೇಕಿತ್ತು. ಆದರೆ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳುವ ಉದ್ದೇಶದಿಂದ ಇಂಗ್ಲೆಂಡ್ ತಂಡದ ನಾಯಕಿ ನೈಟ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮಾರ್ಚ್ 19ರಿಂದ ಏಪ್ರಿಲ್ 7ರವರೆಗೆ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ 5 ಟಿ20 ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಬರೆದುಕೊಂಡಿರುವ ನೈಟ್, 'ನಾನು ಈ ವರ್ಷ ಡಬ್ಲ್ಯೂಪಿಎಲ್ನಿಂದ ಹೊರಗುಳಿಯುತ್ತಿರುವ ವಿಷಯವನ್ನು ತಿಳಿಸಲು ದುಃಖವಾಗಿದೆ. ನ್ಯೂಜಿಲೆಂಡ್ ಪ್ರವಾಸಕ್ಕೆ ಹೋಗುವುದು ನನಗೆ ಸರಿಯಾದ ವಿಷಯ ಎನ್ನಿಸುತ್ತದೆ. ಒಳ್ಳೆಯದಾಗಲಿ ಆರ್ಸಿಬಿ ಮತ್ತು ನಾಯಕಿ ಸ್ಮೃತಿ ಮಂಧಾನ' ಎಂದಿದ್ದಾರೆ.