ಗುವಾಹಟಿ(ಅಸ್ಸೋಂ): ಅಸ್ಸೋಂನ ಖ್ಯಾತ ಈಜುಪಟು ಎಲ್ವಿಸ್ ಅಲಿ ಹಜಾರಿಕಾ ಹೊಸ ದಾಖಲೆ ಬರೆದಿದ್ದಾರೆ. ಇವರು ಪೋಲೆಂಡ್‌ನ ಗ್ಡಾನ್ಸ್ಕ್ ಪೊಮೆರೇನಿಯಾ (ಡ್ಯಾನಿಶ್ ಪೊಮೆರೇನಿಯಾ) ತೀರದ ಬಾಲ್ಟಿಕ್ ಸಮುದ್ರದಲ್ಲಿ ಬರುವ ಗಲ್ಫ್ ಆಫ್ ಪಕ್‌ನಲ್ಲಿ ಈಜಾಡಿ ಸೈ ಎನಿಸಿಕೊಂಡಿದ್ದಾರೆ. ಗಲ್ಫ್ ಆಫ್ ಪಕ್ ಅನ್ನು ಈಜಿದ ಅಸ್ಸೋಂನ ಮೊದಲ ವ್ಯಕ್ತಿ ಎಂಬ ಸಾಧನೆಯನ್ನೂ ಮಾಡಿದ್ದಾರೆ.
"ನಾನು ಅನೇಕ ಜೆಲ್ಲಿ ಮೀನುಗಳು, ಸೀಲ್ ಪ್ರಾಣಿ ಮತ್ತು ಇತರ ಸಮುದ್ರ ಜೀವಿಗಳೊಂದಿಗೆ ಈಜುತ್ತಿದ್ದುದರಿಂದ ಇದು ತುಂಬಾ ಸವಾಲಿನ ಪ್ರಯಾಣವಾಗಿತ್ತು. ಘನೀಕರಿಸುವ ಹಂತದಲ್ಲಿದ್ದ ತಣ್ಣೀರು, ಉಪ್ಪು ನೀರು ಮತ್ತು ಭಾರಿ ಪ್ರವಾಹಗಳು ಪ್ರಯಾಣವನ್ನು ಹೆಚ್ಚು ಕಷ್ಟಕರವಾಗಿಸಿದವು. ಈ ಸಮುದ್ರದಲ್ಲಿ ಈಜುವುದು ನನ್ನ ಬಹುದಿನಗಳ ಕನಸಾಗಿತ್ತು. ಇದೀಗ ಆ ಕನಸು ನನಸಾಗಿದೆ" ಎಂದು ಎಲ್ವಿಸ್ 'ಈಟಿವಿ ಭಾರತ'ಕ್ಕೆ ತಿಳಿಸಿದರು.
ಎಲ್ವಿಸ್ ಅಲಿ ಹಜಾರಿಕಾ ಚಿಕ್ಕ ವಯಸ್ಸಿನಲ್ಲೇ ಈಜಲು ಪ್ರಾರಂಭಿಸಿದ್ದರು. ರಾಷ್ಟ್ರೀಯ ಸೀನಿಯರ್, ಜೂನಿಯರ್ ಮತ್ತು ಸಬ್ ಜೂನಿಯರ್ ಸ್ಪರ್ಧೆಗಳಲ್ಲಿ 134 ಚಿನ್ನದ ಪದಕಗಳನ್ನು ಗೆದ್ದ ದೇಶದ ಏಕೈಕ ಕ್ರೀಡಾಪಟು ಇವರು. ಇದರೊಂದಿಗೆ ಹಲವಾರು ರಾಷ್ಟ್ರೀಯ ದಾಖಲೆಗಳನ್ನೂ ಹೊಂದಿದ್ದಾರೆ. ಕಳೆದ ವರ್ಷ ಇಂಗ್ಲಿಷ್ ಚಾನೆಲ್ನಲ್ಲಿ ಯಶಸ್ವಿಯಾಗಿ ಈಜಿದ್ದರು.
2019ರಲ್ಲಿ ಮೆಕ್ಸಿಕೋದಿಂದ ಯುನೈಟೆಡ್ ಸ್ಟೇಟ್ಸ್‌ಗೆ ಕ್ಯಾಟಲಾನ್ ಚಾನೆಲ್ ಮತ್ತು ಉತ್ತರ ಐರ್ಲೆಂಡ್‌ನಿಂದ ಸ್ಕಾಟ್ಲೆಂಡ್‌ಗೆ ಉತ್ತರ ಚಾನೆಲ್ನಲ್ಲಿ ಈಜಿದ್ದಾರೆ. ಜುಲೈ 19ರಂದು ಉತ್ತರ ಚಾನೆಲ್ ದಾಟಿದ ಮೊದಲ ಅಸ್ಸೋಂನ ಮೊದಲಿಗರಾದರು. 31 ಗಂಟೆಗಳಲ್ಲಿ 78 ಕಿಲೋ ಮೀಟರ್ ಈಜಿ ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ:ಡೈಮಂಡ್ ಲೀಗ್ ಮೇಲೆ ಕಣ್ಣಿಟ್ಟ ನೀರಜ್ ಚೋಪ್ರಾ: ತರಬೇತಿಗಾಗಿ ಸ್ವಿಟ್ಜರ್ಲೆಂಡ್ ತಲುಪಿದ ಅಥ್ಲೀಟ್ - Neeraj Chopra