ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಿನಿಶರ್ ಮತ್ತು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಈ ಬಗ್ಗೆ ತಮ್ಮ ಹುಟ್ಟಿದ ದಿನವಾದ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಎರಡು ದಶಕದ ಕ್ರಿಕೆಟ್ ವೃತ್ತಿಜೀವನವನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ, 'ಕಳೆದ ಕೆಲವು ದಿನಗಳಲ್ಲಿ ನಾನು ಪಡೆದ ಪ್ರೀತಿ, ಬೆಂಬಲಕ್ಕೆ ಅಭಾರಿಯಾಗಿದ್ದೇನೆ. ಇದಕ್ಕೆ ಕಾರಣರಾದ ಎಲ್ಲಾ ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸುಧೀರ್ಘವಾಗಿ ಆಲೋಚಿಸಿದ ಬಳಿಕ ಕ್ರಿಕೆಟ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಇದೀಗ ನನ್ನ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸುತ್ತೇನೆ, ಮುಂಬರುವ ಹೊಸ ಸವಾಲುಗಳಿಗೆ ಸಿದ್ಧನಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಈ ಸುದೀರ್ಘ ಕ್ರಿಕೆಟ್ ಪ್ರಯಾಣವನ್ನು ಆನಂದದಾಯಕವಾಗಿಸಿದ ನನ್ನ ಕೋಚ್‌ಗಳು, ಆಯ್ಕೆಗಾರರು, ತಂಡದ ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆದ ಕೆಲವೇ ಕೆಲವು ಅದೃಷ್ಟವಂತರಲ್ಲಿ ನಾನೂ ಒಬ್ಬ ಎಂದು ಪರಿಗಣಿಸುತ್ತೇನೆ. ಇಷ್ಟು ಅಭಿಮಾನಿಗಳು ಮತ್ತು ಸ್ನೇಹಿತರ ಅಭಿಮಾನವನ್ನು ಗಳಿಸಿರುವ ನಾನು ಇನ್ನೂ ಹೆಚ್ಚಿನ ಅದೃಷ್ಟಶಾಲಿಯಾಗಿದ್ದೇನೆ.
ನನ್ನ ಪೋಷಕರು ನನ್ನ ಶಕ್ತಿ ಮತ್ತು ಬೆಂಬಲದ ಆಧಾರ ಸ್ತಂಭವಾಗಿದ್ದಾರೆ. ಅವರ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ವೃತ್ತಿಪರ ಆಟಗಾರ್ತಿಯಾಗಿರುವ ನನ್ನ ಪತ್ನಿ ದೀಪಿಕಾಗೂ ನಾನು ಕೃತಜ್ಞನನಾಗಿದ್ದೇನೆ. ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮ ಬೆಂಬಲ ಮತ್ತು ಹಾರೈಕೆಗಳಿಲ್ಲದಿದ್ದರೆ ಇಂದು ಈ ಸ್ಥಾನದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದು ಬರೆದುಕೊಂಡು ನಿವೃತ್ತಿ ಘೋಷಿಸಿದ್ದಾರೆ.