ನವದೆಹಲಿ:ಗೆಲ್ಲಬೇಕೆಂಬ ಛಲ ಮತ್ತು ಸಾಂಘಿಕ ಹೋರಾಟ ತಂಡವನ್ನು ಗೆದ್ದೇ ಗೆಲ್ಲಿಸುತ್ತದೆ ಎಂಬುದಕ್ಕೆ ಶುಕ್ರವಾರ ರಾತ್ರಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಸಾಕ್ಷಿಯಾಯಿತು. ಕೊನೆಯ ಎಸೆತದವರೆಗೂ ಭಾರೀ ರೋಚಕತೆ ಕಾಪಾಡಿಕೊಂಡಿದ್ದ ಪಂದ್ಯವನ್ನು ಯುಪಿ ಮಹಿಳೆಯರು 1 ರನ್ನಿಂದ ಜಯಿಸಿದರು. ಇದಕ್ಕೆ ಪ್ರಮುಖ ಕಾರಣವಾಗಿದ್ದು ದೀಪ್ತಿ ಶರ್ಮಾ ಅವರ ಆಲ್ರೌಂಡ್ ಆಟ.
ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಡೆಲ್ಲಿ ಗೆಲುವಿನ ದಡದಲ್ಲಿದ್ದರೂ, ದಿಢೀರ್ ಕುಸಿದು ಅಚ್ಚರಿಯ ಸೋಲು ಅನುಭವಿಸಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡಕ್ಕೆ ಇದು ನಾಲ್ಕನೇ ಸೋಲಾಗಿದೆ. ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯವನ್ನು ಕೈಚೆಲ್ಲುವ ಮೂಲಕ ನಿರಾಸೆ ಅನುಭವಿಸಿತು. ಯುಪಿ ತಂಡ ನಾಲ್ಕನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಫಲಿತಾಂಶದ ಮೇಲೆ ಸೆಮಿಫೈನಲ್ ತಲುಪುವ ಲೆಕ್ಕಾಚಾರ ಸಾಗಿದೆ.
15 ರನ್ಗೆ 6 ವಿಕೆಟ್:ಇದು ಯಾವುದೋ ಬೌಲರ್ನ ಅದ್ಭುತ ಪ್ರದರ್ಶನವಲ್ಲ. ಡಬ್ಲ್ಯೂಪಿಎಲ್ನ ಬಲಿಷ್ಠ ತಂಡವಾದ ಡೆಲ್ಲಿ ಕೊನೆ ಗಳಿಗೆಯಲ್ಲಿ ಸರ್ವಪತನ ಕಂಡ ರೀತಿ. ಗೆಲುವಿಗೆ 139 ರನ್ ಗುರಿ ಪಡೆದ ತಂಡವನ್ನು ಗೆಲ್ಲಿಸಲು ನಾಯಕಿ ಮೆಗ್ ಲ್ಯಾನಿಂಗ್ ಏಕಾಂಗಿಯಾಗಿ ಹೋರಾಡಿದರು. ಉಳಿದ ಬ್ಯಾಟರ್ಗಳು ಕೈಕೊಟ್ಟ ಕಾರಣ ಫಲಿತಾಂಶ ತಲೆಕೆಳಗಾಯಿತು. ಮೆಗ್ ಭರ್ಜರಿ ಬ್ಯಾಟ್ ಬೀಸಿ 46 ಎಸೆತಗಳಲ್ಲಿ 60 ರನ್ ಗಳಿಸಿದರು. ಇದರಲ್ಲಿ 12 ಬೌಂಡರಿಗಳಿದ್ದವು.
ತಂಡ 93 ರನ್ ಗಳಿಸಿದ್ದಾಗ ನಾಯಕಿ ಔಟಾದರು. ಬಳಿಕ ಜೆಮಿಮಾ ರೋಡ್ರಿಗಸ್ 17, ಅನ್ನಾಬೆಲ್ ಸುದರ್ಲೆಂಡ್ 6, ಜೆಸ್ ಜೊನಾಸ್ಸನ್ 11, ಅರುಂಧತಿ ರೆಡ್ಡಿ ಸೊನ್ನೆಗೆ ಔಟಾದರು. ಇದಕ್ಕೂ ಮೊದಲು ಡ್ಯಾಶಿಂಗ್ ಬ್ಯಾಟರ್ ಶೆಫಾಲಿ ವರ್ಮಾ 15, ಅಲಿಸಿ ಕ್ಯಾಪ್ಸಿ ತಲಾ 15 ರನ್ಗೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ತಂಡ ಸಂಕಷ್ಟಕ್ಕೆ ಸಿಲುಕಿತು. ಒಂದು ಹಂತದಲ್ಲಿ 124ಕ್ಕೆ 4 ವಿಕೆಟ್ ಕಳೆದುಕೊಂಡು ಗೆಲುವಿನ ಹೊಸ್ತಿಲಲ್ಲಿತ್ತು.