ನವದೆಹಲಿ: ಭಾರತದ ಮಹಿಳಾ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮಹಿಳೆಯರ ವೈಯಕ್ತಿಕ ವಿಭಾಗದ ಆರ್ಚರಿ ಪಂದ್ಯದದಲ್ಲಿ ಪ್ರೀ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದಿದ್ದಾರೆ. ಭಾರತದ ಅಗ್ರ ಬಿಲ್ಲುಗಾರ್ತಿ ದೀಪಿಕಾ ನೆದರ್ಲೆಂಡ್ಸ್‌ನ ಕ್ವಿಂಟಿ ರೋಫೆನ್ ವಿರುದ್ಧ 6-2 ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಭಾರತೀಯ ಮಹಿಳಾ ಆರ್ಚರ್ಸ್ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೋಲನುಭವಿಸಿತ್ತು. ಇದರಲ್ಲಿ ದೀಪಿಕಾ ಅವರು ಕಳಪೆ ಪ್ರದರ್ಶನದಿಂದಾಗಿ ಟೀಕೆಗೆ ಗುರಿಯಾಗಿದ್ದರು. ಇದೀಗ ಸಿಂಗಲ್ಸ್ನಲ್ಲಿ ಅದೇ ನೆದರ್ಲೆಂಡ್ಸ್ ವಿರುದ್ಧ ಗೆದ್ದು ಪದಕದ ಕನಸನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಆಗಸ್ಟ್ 3 ರಂದು ದೀಪಿಕಾ ಕುಮಾರಿ 16ನೇ ಸುತ್ತಿನ ಪಂದ್ಯದಲ್ಲಿ ಆಡಲಿದ್ದಾರೆ. ಅಲ್ಲಿ ಅವರು ಜರ್ಮನಿಯ ಮಿಚೆಲ್ ಕ್ರೊಪೆನ್‌ರನ್ನು ಎದುರಿಸಲಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ದೀಪಿಕಾ ಮೊದಲ ಸೆಟ್ ಅನ್ನು 29 ಅಂಕಗಳೊಂದಿಗೆ ಗೆಲ್ಲುವ ಮೂಲಕ ಪ್ರಾರಂಭಿಸಿದರು. ಎರಡು ಸೆಟ್ ಪಾಯಿಂಟ್‌ಗಳಿಂದ ಮುನ್ನಡೆಯನ್ನೂ ಕಾಯ್ದುಕೊಂಡರು. ಎರಡನೇ ಸುತ್ತಿನಲ್ಲಿ ರೋಫೆನ್ ಪುನರಾಗಮನ ಮಾಡಿ 29-27 ಅಂಕಗಳಿಸುವ ಮೂಲಕ ಸಮಬಲ ಸಾಧಿಸಿದರು. ನಂತರ ಡಚ್ ಬಿಲ್ಲುಗಾರ್ತಿ ಮೂರನೇ ಸೆಟ್‌ನಲ್ಲಿ ಕೆಟ್ಟ ಹೊಡೆತದಿಂದಾಗಿ ಯಾವುದೇ ಅಂಕ ದಾಖಲಿಸಲು ಸಾಧ್ಯವಾಗಲಿಲ್ಲ. ದೀಪಿಕಾ ಕೊನೆಯ ಸೆಟ್‌ನಲ್ಲಿ ತಮ್ಮ ಪ್ರದರ್ಶನವನ್ನು ಮುಂದುವರೆಸಿ ಅಂತಿಮವಾಗಿ ಎದುರಾಳಿಯನ್ನು 6-2 ರಿಂದ ಸೋಲಿಸಿದರು.