ಸಿಂಗಾಪುರ:ಭಾರತದ ಗ್ರ್ಯಾಂಡ್‌ಮಾಸ್ಟರ್ ದೊಮ್ಮರಾಜು ಗುಕೇಶ್ ಅವರು ಗುರುವಾರ ನಡೆದ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಕಳೆದ 13 ಪಂದ್ಯಗಳಲ್ಲಿ ಡ್ರಾ ಸಾಧಿಸುತ್ತಾ ಬಂದಿದ್ದ ಗುಕೇಶ್ ಇಂದು ನಡೆದ 14ನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ 2024ರ ಸಾಲಿನ ವಿಶ್ವ ಚಾಂಪಿಯನ್‌ಶಿಪ್ ಗೆದ್ದುಕೊಂಡರು. ಚೆಸ್ ಆಟದ 138 ವರ್ಷಗಳಲ್ಲಿ ಏಷ್ಯಾದ ಇಬ್ಬರು ಸ್ಪರ್ಧಿಗಳು ಫೈನಲ್ಗೆ ತಲುಪಿದ್ದು ಇದೇ ಮೊದಲು. ಚೀನಾ ಮತ್ತು ಭಾರತದ ಆಟಗಾರರ ನಡುವಿನ ಸೆಣಸಾಟದಲ್ಲಿ ಜಯ ಗುಕೇಶ್ ಅವರದ್ದಾಯಿತು.
ಹಾಲಿ ವಿಶ್ವ ಚಾಂಪಿಯನ್ ಆಗಿದ್ದ ಚೀನಾದ 32 ವರ್ಷದ ಡಿಂಗ್ ಲಿರೆನ್ ಅವರು ಭಾರತದ ಗ್ರ್ಯಾಂಡ್ಮಾಸ್ಟರ್ಗೆ ಕಳೆದ 13 ಪಂದ್ಯಗಳಲ್ಲಿ ತೀವ್ರ ಪೈಪೋಟಿ ನೀಡಿದ್ದರು. ಇಬ್ಬರೂ 6.5 ಸಮಾನ ಅಂಕ ಗಳಿಸಿದ್ದರು. ಗೆಲುವಿನ ಬಳಿಕ ಗುಕೇಶ್ ಅವರಿಗೆ 21.21 ಕೋಟಿ ರೂಪಾಯಿ (2.5 ಮಿಲಿಯನ್ ಅಮೆರಿಕನ್ ಡಾಲರ್) ಬಹುಮಾನ ಲಭಿಸಿದೆ.
ವಿಶ್ವದ ಅತಿ ಕಿರಿಯ ಚಾಂಪಿಯನ್:18 ವರ್ಷದ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ. ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಗೆದ್ದ ವಿಶ್ವದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ರಷ್ಯಾದ ದಂತಕಥೆ ಗ್ಯಾರಿ ಕಾಸ್ಪರೋವ್ ಅವರು 1985ರಲ್ಲಿ 22ನೇ ವಯಸ್ಸಿನಲ್ಲಿ ಚಾಂಪಿಯನ್ ಆಗಿದ್ದರು. ಈ ದಾಖಲೆಯನ್ನು ಭಾರತೀಯ ಮುರಿದರು.
ವಿಶ್ವ ಚಾಂಪಿಯನ್ ಗೆದ್ದ ಗುಕೇಶ್ ಚೆಸ್ ಇತಿಹಾಸದ ಮೂರನೇ ಗ್ರ್ಯಾಂಡ್‌ಮಾಸ್ಟರ್ ಆಗಿದ್ದಾರೆ. ಚೆಸ್ ದಂತಕಥೆ ಜಿ.ಎಂ.ವಿಶ್ವನಾಥನ್ ಅವರ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಅಭಿದಾನಕ್ಕೂ ಪಾತ್ರರಾದರು. ಆನಂದ್ ಅವರು 5 ಬಾರಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದಿದ್ದಾರೆ. 1886ರಿಂದ ಆರಂಭವಾಗಿರುವ ವಿಶ್ವ ಚೆಸ್ ಚಾಂಪಿಯನ್ ಪ್ರಶಸ್ತಿಯಲ್ಲಿ 17 ಆಟಗಾರರು ಚಾಂಪಿಯನ್ ಆಗಿದ್ದಾರೆ. ಗುಕೇಶ್ ಈಗ 18ನೇ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ.
ಉಕ್ಕಿದ ಆನಂದಭಾಷ್ಪ:ಡಿಂಗ್ ಲಿರೆನ್ ವಿರುದ್ಧ ಗೆಲುವು ಖಚಿತವಾಗುತ್ತಿದ್ದಂತೆಯೇ ಗುಕೇಶ್ ಕಣ್ಣಲ್ಲಿ ಗೆಲುವಿನ ಕಣ್ಣೀರು ಸುರಿಯಿತು. ಜಯದ ಸಂಭ್ರಮವನ್ನು ತಡೆಯಲಾಗದೆ ಗ್ರ್ಯಾಂಡ್‌ಮಾಸ್ಟರ್ ಆನಂದಭಾಷ್ಪ ಸುರಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
10 ವರ್ಷಗಳ ಕನಸು ನನಸು:ಗೆಲುವಿನ ಬಳಿಕ ಮಾತನಾಡಿದ ವಿಶ್ವ ಚಾಂಪಿಯನ್ ಗುಕೇಶ್, "ಈ ದಿನಕ್ಕಾಗಿ ನಾನು 10 ವರ್ಷಗಳಿಂದ ಕಾಯುತ್ತಿದ್ದೆ. ಕೊನೆಗೂ ನನ್ನ ಕನಸು ನನಸಾಗಿದೆ. ನಾನು ಟೂರ್ನಿಯಲ್ಲಿ ನನ್ನ ಅತ್ಯುತ್ತಮ ಆಟವಾಡಿದೆ. ಇದನ್ನು ಮುಂದುವರಿಸಿಕೊಂಡು ಹೋಗುವೆ" ಎಂದು ಹೇಳಿದರು. ಮುಂದುವರೆದು, "ಹಾಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದು ಅತ್ಯುತ್ತಮ ಕ್ಷಣವಾಗಿದೆ. ಆತ ಯಾರೆಂಬುದು ಪ್ರಪಂಚಕ್ಕೆ ಗೊತ್ತಿದೆ" ಎಂದರು.
ಇದನ್ನೂ ಓದಿ:'ಅಧಿಕ ತೂಕ ಹೊಂದಿರುವ ಈತ ದೀರ್ಘಾವಧಿಯ ಕ್ರಿಕೆಟಿಗನಲ್ಲ': ಭಾರತದ ಸ್ಟಾರ್ ಆಟಗಾರನ ಟೀಕಿಸಿದ ದಿಗ್ಗಜ ಬ್ಯಾಟರ್