ಲಖನೌ (ಉತ್ತರಪ್ರದೇಶ):ಇಲ್ಲಿನ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಲಖನೌ ಸೂಪರ್ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಜಯ ಸಾಧಿಸಿದೆ. ಡೆಲ್ಲಿ ಆಡಿದ 6 ಪಂದ್ಯಗಳಲ್ಲಿ 2ನೇ ಜಯ ದಾಖಲಿಸಿತು. ನಾಯಕ ರಿಷಭ್ ಪಂತ್ 41 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಫೀಲ್ಡಿಂಗ್ ವೇಳೆ ಎಡವಟ್ಟು ಮಾಡಿಕೊಂಡ ಪಂತ್ ಅಂಪೈರ್ಗಳ ಜೊತೆಗೆ ವಾಗ್ವಾದ ಮಾಡಿದ ಘಟನೆಯೂ ನಡೆಯಿತು.
ಎಲ್‌ಎಸ್‌ಜಿ 3 ಓವರ್‌ಗಳ ಅಂತ್ಯಕ್ಕೆ 1 ವಿಕೆಟ್‌ಗೆ 28 ರನ್ ಗಳಿಸಿತ್ತು. ಆರಂಭಿಕ ಕ್ವಿಂಟನ್ ಡಿ ಕಾಕ್ ಔಟಾದ ನಂತರ ದೇವದತ್ ಪಡಿಕ್ಕಲ್ ಆಗಷ್ಟೇ ಕ್ರೀಸ್‌ಗೆ ಬಂದಿದ್ದರು. ಇಶಾಂತ್ ಶರ್ಮಾ ಎಸೆದ ಓವರ್ನ ನಾಲ್ಕನೇ ಎಸೆತದಲ್ಲಿ ಲೆಗ್ ಸೈಡ್ ಕೆಳಗೆ ವೈಡ್ ಬೌಲ್ ಆಯಿತು. ಆದರೆ, ಇದನ್ನು ಪಂತ್ ಸರಿಯಾದ ಬೌಲ್ ಎಂದುಕೊಂಡರು. ಆದರೆ, ಮೈದಾನದ ಅಂಪೈರ್ಗಳು ವೈಡ್ ಬಾಲ್ ನೀಡಿದರು. ಇದನ್ನು ಪ್ರಶ್ನಿಸುವಂತೆ ಪಂತ್ ಡಿಆರ್ಎಸ್ ಮನವಿಯ ಸನ್ನೆಯನ್ನು ಮಾಡಿದರು.
ಅಂಪೈರ್ಗಳು ಇದನ್ನ ಪುರಸ್ಕರಿಸಿ ಮೇಲ್ಮನವಿ ಸಲ್ಲಿಸಿದರು. ಮೂರನೇ ಅಂಪೈರ್ ಕೂಡ ಎಸೆತವನ್ನು ವೈಡ್ ಎಂದು ಪರಿಗಣಿಸಿದರು. ತಕ್ಷಣವೇ ಪಂತ್ ತಾನು ಎಸೆತದ ವಿರುದ್ಧ ಮೇಲ್ಮನವಿ ಸಲ್ಲಿಸಿರಲಿಲ್ಲ. ಆಟಗಾರನ ಬಳಿ ಚರ್ಚೆಯ ಭಾಗವಾಗಿ ನಾನು ಸನ್ನೆಯನ್ನು ಮಾಡಿದೆ ಎಂದು ಸಮರ್ಥಿಸಿಕೊಂಡರು. ಆದರೆ, ಅಂಪೈರ್ ಇದನ್ನು ನಿರಾಕರಿಸಿದರು. ಇದನ್ನು ಡಗೌಟ್ನಲ್ಲಿ ಕುಳಿತು ಗಮನಿಸಿದ ತಂಡದ ಸಿಬ್ಬಂದಿ ಕೂಡ ಗೊಂದಲಕ್ಕೀಡಾದರು. ಪಂತ್ ತಮ್ಮ ಈ ಅಜಾಗರೂಕತೆಯಿಂದಾಗಿ ಡಿಆರ್ಎಸ್ ಪಡೆಯುವ ಅವಕಾಶಗಳಲ್ಲಿ ಒಂದನ್ನು ವ್ಯರ್ಥವಾಗಿ ಕಳೆದುಕೊಂಡರು.