ಚೆನ್ನೈ(ತಮಿಳುನಾಡು):ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೇಲೆ ಭಾರತದ ವನಿತೆಯರು ಬಿಗಿ ಹಿಡಿತ ಸಾಧಿಸಿದ್ದಾರೆ. 603 ರನ್ಗಳ ಬೃಹತ್ ಗುರಿ ನೀಡಿದ ಭಾರತ ಬಳಿಕ, ಆಫ್ರಿಕಾದ ಮೊದಲ ಇನಿಂಗ್ಸ್ ಅನ್ನು 266 ರನ್ಗೆ ಕಟ್ಟಿಹಾಕಿತು. ಆಫ್ರಿಕನ್ನರ ಮೇಲೆ ಫಾಲೋಆನ್ ಹೇರಲಾಗಿದ್ದು, ಸೋಲಿನ ಸುಳಿಗೆ ಸಿಲುಕಿದ್ದಾರೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು ಭಾರತದ ಸ್ಪಿನ್ನರ್ ಸ್ನೇಹ ರಾಣಾ ಅವರ ಮಾರಕ ಬೌಲಿಂಗ್ ದಾಳಿ.
ಬಲಗೈ ಆಫ್ ಸ್ಪಿನ್ನರ್ ಸ್ನೇಹ ರಾಣಾ ದಕ್ಷಿಣ ಆಫ್ರಿಕಾದ ಮೇಲೆ ಸಿಡಿಲಂತೆ ಎರಗಿದರು. ಬ್ಯಾಟಿಂಗ್ ಪಡೆಯನ್ನೇ ಧೂಳೀಪಟ ಮಾಡಿದ ಅವರು ಒಂದೇ ಇನಿಂಗ್ಸ್ನಲ್ಲಿ 8 ವಿಕೆಟ್ ಉರುಳಿಸಿದರು. ಸತತ ದಾಳಿ ನಡೆಸಿದ ರಾಣಾ 25.3 ಓವರ್ಗಳಲ್ಲಿ 77 ರನ್ ನೀಡಿದರು. ಇನ್ನೊಂದೆಡೆ, ಹಿರಿಯ ಸ್ಪಿನ್ನರ್ ದೀಪ್ತಿ ಶರ್ಮಾ ಉಳಿದೆರಡು ವಿಕೆಟ್ ಪಡೆದು ಮೊದಲ ಇನಿಂಗ್ಸ್ಗೆ ತೆರೆ ಎಳೆದಿದ್ದರು.
ಮರಿಝನ್ನೆ ಕಾಪ್ (74), ಅನ್ನೆಕೆ ಬಾಚ್ (39), ನದಿನೆ ಡಿ ಕ್ಲಾರ್ಕ್ (39) ನಾಯಕಿ ವಾಲ್ವಾರ್ಟ್ (20) ದೊಡ್ಡ ಇನಿಂಗ್ಸ್ ಕಟ್ಟದಂತೆ ಸ್ನೇಹ ತಡೆದರು. 4 ವಿಕೆಟ್ಗೆ 200 ರನ್ ಗಳಿಸಿದ್ದ ಆಫ್ರಿಕಾ ಉಳಿದ ಆರು ವಿಕೆಟ್ಗಳನ್ನು 60 ರನ್ಗಳ ಅಂತರದಲ್ಲಿ ಕಳೆದುಕೊಂಡು ಸರ್ವಪತನ ಕಂಡಿತು.
ಫಾಲೋಆನ್ ಹೇರಿದ ಭಾರತ:ಮೊದಲ ಇನಿಂಗ್ಸ್ನಲ್ಲಿ 337 ರನ್ಗಳ ಮುನ್ನಡೆ ಪಡೆದ ಭಾರತ, ಆಫ್ರಿಕನ್ನರ ಮೇಲೆ ಫಾಲೋಆನ್ ಹೇರಿತು. 4ನೇ ದಿನದಾಟವಾದ ಸೋಮವಾರ 5 ವಿಕೆಟ್ಗೆ 287 ರನ್ ಗಳಿಸಿದೆ. ಇನ್ನೂ 50 ರನ್ಗಳ ಹಿನ್ನಡೆ ಹೊಂದಿದೆ. ನಾಯಕಿ ಲೌರಾ ವಾಲ್ವಾಟ್ 122, ಸುನೆ ಲೂಸ್ 109 ಶತಕ ಗಳಿಸಿ ಸೋಲಿನ ಅಂತರ ತಗ್ಗಿಸಿದರು. ಎರಡನೇ ಇನಿಂಗ್ಸ್ನಲ್ಲಿ ಸ್ನೇಹ 1 ವಿಕೆಟ್ ಪಡೆದಿದ್ದಾರೆ.
ರಾಣಾ ಬೌಲಿಂಗ್ಗೆ ಕೋಚ್ ಮೆಚ್ಚುಗೆ:ಸ್ನೇಹ ರಾಣಾರ ಮಾರಕ ದಾಳಿಯನ್ನು ಮಹಿಳಾ ತಂಡದ ಮುಖ್ಯ ಕೋಚ್ ಅಮೋಲ್ ಮುಜುಂದಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ನೇಹ ರಾಣಾ ಅವರು ಉತ್ತಮ ಬೌಲಿಂಗ್ ಕೌಶಲ್ಯ ಪ್ರದರ್ಶಿಸಿದರು. ಆಸ್ಟ್ರೇಲಿಯಾ ವಿರುದ್ಧವೂ ಕಳೆದ ವರ್ಷ ನಡೆದ ಟೆಸ್ಟ್ನಲ್ಲಿ ಉತ್ತಮ ಆಟವಾಡಿ 'ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದಿದ್ದರು. ಬಳಿಕ ಎನ್ಸಿಎನಲ್ಲಿ ಬೌಲಿಂಗ್ ಶಿಬಿರಕ್ಕೆ ಹಾಜರಾಗಿ ಬೌಲಿಂಗ್ ಕೌಶಲ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಿದರು. ಆ ಅಸ್ತ್ರಗಳನ್ನು ಈ ಪಂದ್ಯದಲ್ಲಿ ಬಳಸಿದರು ಎಂದು ಹೇಳಿದ್ದಾರೆ.
ರಾಣಾ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಒಂದು ಇನಿಂಗ್ಸ್ನಲ್ಲಿ ಎಂಟು ವಿಕೆಟ್ ಪಡೆಯುವುದು ಸುಲಭವಲ್ಲ. ಇದು ಅವರ ಬೌಲಿಂಗ್ ಚಾಣಾಕ್ಷತೆಗೆ ಸಾಕ್ಷಿಯಾಗಿದೆ ಎಂದು ಹೊಗಳಿದ್ದಾರೆ.
ಇದನ್ನೂ ಓದಿ:ವಿಶ್ವಕಪ್ ಎತ್ತಿ ಹಿಡಿದ ಬಳಿಕ ಪಿಚ್ ಮೇಲಿನ ಮಣ್ಣು ತಿಂದು 'ಗೆಲುವಿನ ರುಚಿ' ಸವಿದ ರೋಹಿತ್ ಶರ್ಮಾ - Rohit Sharma