ICC Champions Trophy 2025: ಕೊನೆಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಿದೆ. ಈ ವಿಷಯ ಕುರಿತು ಶನಿವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಭಾರತ ಆಡುವ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸಲು ಒಪ್ಪಿರುವುದಾಗಿ ಪಿಸಿಬಿಯು ಐಸಿಸಿಗೆ ತಿಳಿಸಿದೆ. ಆದ್ರೆ 3 ಷರತ್ತುಗಳನ್ನು ವಿಧಿಸಿದೆ.
ಮುಂದಿನ ವರ್ಷ ಫ್ರೆಬ್ರವರಿಯಂದು ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಇದಕ್ಕಾಗಿ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನಕ್ಕೆ ಯಾವುದೇ ಕಾರಣಕ್ಕೂ ಟೀಂ ಇಂಡಿಯಾ ಹೋಗಲ್ಲ ಎಂದು ಬಿಸಿಸಿಐ ತಿಳಿಸಿತ್ತು. ಇಲ್ಲದಿದ್ದರೇ ಟೂರ್ನಿಯಿಂದಲೇ ಹಿಂದೆ ಸರಿಯುವುದಾಗಿಯೂ ಹೇಳಿತ್ತು. ಇದಕ್ಕೆ ಮಣಿದಿರುವ ಪಾಕ್ ಷರತ್ತಿನೊಂದಿಗೆ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿದೆ. ಪಾಕ್ ವಿಧಿಸಿರುವ ಷರತ್ತುಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.
ಮೊದಲ ಷರತ್ತು:2031ರ ವರೆಗೆ ಭಾರತದಲ್ಲಿ ನಡೆಯುವ ಐಸಿಸಿ ಆಯೋಜಿತ ಟೂರ್ನಿಗಳನ್ನು ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು. ಯಾವುದೇ ಕಾರಣಕ್ಕೂ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಪಿಸಿಬಿ ಐಸಿಸಿಗೆ ಹೇಳಿರುವುದಾಗಿ ಮೂಲಗಳು ಬಹಿರಂಗಪಡಿಸಿವೆ. ಭವಿಷ್ಯದಲ್ಲಿ ಭಾರತ ಆತಿಥ್ಯ ವಹಿಸಲಿರುವ ಐಸಿಸಿ ಟೂರ್ನಿಗಳನ್ನೂ ಹೈಬ್ರಿಡ್ ಮಾದರಿಯಲ್ಲೇ ಆಯೋಜಿಸಬೇಕು ಎಂಬ ಷರತ್ತನ್ನು ಪಿಸಿಬಿ ಹಾಕಿದೆ. ಆದ್ರೆ ಮುಂದಿನ 7 ವರ್ಷಗಳಲ್ಲಿ ಭಾರತವು T20 ವಿಶ್ವಕಪ್ (2026), ಚಾಂಪಿಯನ್ಸ್ ಟ್ರೋಫಿ (2029) ಮತ್ತು ODI ವಿಶ್ವಕಪ್ (2031)ಗೆ ಆತಿಥ್ಯ ವಹಿಸಿಕೊಳ್ಳಲಿದೆ.
ಎರಡನೇ ಷರತ್ತು:ಐಸಿಸಿ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಒಪ್ಪಿಗೆ ಸೂಚಿಸಲು ವಾರ್ಷಿಕ ಆದಾಯದಲ್ಲಿ ಹೆಚ್ಚಿನ ಪಾಲು ನೀಡಬೇಕೆಂದಿದೆ. ಇದಕ್ಕೆ ಒಪ್ಪಿಗೆ ಸೂಚಿಸಿದರೆ ಮಾತ್ರ ಹೈಬ್ರಿಡ್ ಮಾದರಿ ಒಪ್ಪಿಕೊಳ್ಳುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಐಸಿಸಿ ಮುಂದಿನ ವರ್ಷ ಶೇ.5.75 ರಷ್ಟು ಪಿಸಿಬಿ ಆದಾಯವನ್ನು ಹೆಚ್ಚಿಸುವಂತೆ ಕೋರಿದೆ.
ಮೂರನೇ ಷರತ್ತು:ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಒಂದು ವೇಳೆ ಸೆಮಿಫೈನಲ್ ಮತ್ತು ಫೈನಲ್ಗೆ ಪ್ರವೇಶಿಸದಿದ್ದರೆ, ಆ ಪಂದ್ಯಗಳನ್ನು ಪಾಕಿಸ್ತಾನದಲ್ಲೇ ನಡೆಸಬೇಕು. ಈ ಪಂದ್ಯಗಳನ್ನು ಲಾಹೋರ್ ಮೈದಾನದಲ್ಲಿ ಆಯೋಜಿಸಬೇಕು ಎಂಬ ಷರತ್ತು ವಿಧಿಸಿದೆ.
ಏತನ್ಮಧ್ಯೆ, ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ವೇಳಾಪಟ್ಟಿಯನ್ನು ಅಂತಿಮಗೊಳಿಸಿಲ್ಲ. ಇದೀಗ ಶನಿವಾರ ನಡೆದ ಸಭೆಯಲ್ಲಿ ಪಾಕ್ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿರುವುದರಿಂದ ಅಧಿಕೃತ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಟೀಂ ಇಂಡಿಯಾ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡುವ ಸಾಧ್ಯತೆ ಇದೆ. ಆದರೆ ಇನ್ನೂ ಸ್ಪಷ್ಟತೆ ಸಿಗಬೇಕಿದೆ. ಹಿಂದಿನ ವೇಳಾಪಟ್ಟಿಯ ಪ್ರಕಾರ, ಈ ಪಂದ್ಯಾವಳಿಯು ಫೆಬ್ರವರಿ 19 ರಿಂದ ಮಾರ್ಚ್ 9ರ ವರೆಗೆ ಇತ್ತು. ಚಾಂಪಿಯನ್ಸ್ ಟ್ರೋಫಿ ಕೊನೆಯ ಬಾರಿಗೆ 2017ರಲ್ಲಿ ನಡೆದಿತ್ತು. ಆಗ ಸರ್ಫರಾಜ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ ಪ್ರಶಸ್ತಿ ಗೆದ್ದುಕೊಂಡಿತ್ತು.
ಇದನ್ನೂ ಓದಿ:ಚೊಚ್ಚಲ ಟೆಸ್ಟ್ನಲ್ಲೇ ವಿಧ್ವಂಸಕ ಪ್ರದರ್ಶನ: RCB ಬ್ಯಾಟರ್ನ ಸ್ಫೋಟಕ ಆಟಕ್ಕೆ ಬೆಚ್ಚಿಬಿದ್ದ ನ್ಯೂಜಿಲೆಂಡ್!