ರಾವಲ್ಪಿಂಡಿ(ಪಾಕಿಸ್ತಾನ): ಐಸಿಸಿ ಚಾಂಪಿಯನ್ಸ್ ಟ್ರೋಫಿ-2025ರ ಭಾಗವಾಗಿ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಇಂದು ಪಾಕಿಸ್ತಾನದ ರಾವಲ್ಪಿಂಡಿ ಮೈದಾನದಲ್ಲಿ ಪಂದ್ಯ ನಡೆಯಬೇಕಿತ್ತು. ಆದರೆ ಮಳೆ ಅಡ್ಡಿಪಡಿಸಿದೆ. ಜಿಟಿಜಿಟಿ ಮಳೆಯಿಂದಾಗಿ ಇನ್ನೂ ಟಾಸ್ ಆಗಿಲ್ಲ. ಬಹುತೇಕ ಪಂದ್ಯ ರದ್ದಾಗುವ ಸಾಧ್ಯತೆ ಗೋಚರಿಸಿದೆ.
ಡಕ್ವರ್ತ್ ಲೂಯಿಸ್ ಅನ್ವಯ ಹೇಗೆ?: ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ಬರಬೇಕಾದರೆ, ಎರಡೂ ತಂಡಗಳ ನಡುವೆ ಕನಿಷ್ಠ 25-25 ಓವರ್‌ಗಳ ಪಂದ್ಯ ನಡೆಯಬೇಕು. ಇಷ್ಟು ಓವರ್‌ಗಳ ಪಂದ್ಯ ನಡೆಸಲು ಸಾಧ್ಯವಾಗದೇ ಇದ್ದರೆ ಪಂದ್ಯ ರದ್ದುಗೊಳಿಸಲಾಗುತ್ತದೆ. ಅಲ್ಲದೇ ಗ್ರೂಪ್ ಹಂತದ ಪಂದ್ಯ ರದ್ದಾದರೆ ಅದಕ್ಕೆ ಯಾವುದೇ ಮೀಸಲು ದಿನವಿಲ್ಲ. ಇತ್ತಂಡಗಳಿಗೂ ತಲಾ 1 ಅಂಕ ನೀಡಲಾಗುತ್ತದೆ.
ಎರಡೂ ತಂಡಗಳಿಗೆ ಲಾಭ:ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಬಿ ಗುಂಪಿನ ಎರಡು ತಂಡಗಳಿಗೆ ಲಾಭವಾಗಲಿದ್ದು ಸೆಮಿಫೈನಲ್ ಕನಸು ಜೀವಂತವಾಗಿರುತ್ತದೆ. ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ,ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ತಂಡಗಳಿವೆ. ಆದರೆ ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ತಲಾ ಒಂದು ಪಂದ್ಯಗಳಲ್ಲಿ ಸೋಲು ಕಂಡಿವೆ.
ಇದೀಗ ಈ ಪಂದ್ಯ ರದ್ದಾದರೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗೆ ತಲಾ ಒಂದು ಅಂಕ ಸಿಗುತ್ತದೆ. ಆಗ ಎರಡೂ ತಂಡಗಳ ಅಂಕ 3-3 ಆಗುತ್ತದೆ. ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಸೆಮಿಸ್ ತಲುಪಲು ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾಗುತ್ತದೆ.