Ind vs Aus 2nd Test: ಭಾರತ ವಿರುದ್ದ ಎರಡನೇ ಟೆಸ್ಟ್ಗಾಗಿ ಆಸ್ಟ್ರೇಲಿಯಾ ಇಂದು ಬಲಿಷ್ಟ ತಂಡವನ್ನು ಪ್ರಕಟಿಸಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ 295 ರನ್ಗಳ ಬೃಹತ್ ಅಂತರದಿಂದ ಭಾರತ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲೂ 1-0 ಅಂತರದಿಂದ ಮುನ್ನಡೆ ಪಡೆದಿದೆ. ಇದೀಗ 2ನೇ ಟೆಸ್ಟ್ನಲ್ಲಿ ಟೀಂ ಇಂಡಿಯಾವನ್ನು ಮಣಿಸಿಲು ಯೋಜನೆ ರೂಪಿಸಿಕೊಂಡಿರುವ ಆಸೀಸ್ ಪಡೆ ಡೇಂಜರಸ್ ಆಲ್ರೌಂಡರ್ನನ್ನು ತಂಡಕ್ಕೆ ಕರೆತಂದಿದೆ.
ಅಡಿಲೇಡ್‌ನಲ್ಲಿ ಡೇ-ನೈಟ್ ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಡೆಯಲಿದೆ. ಆದರೆ, ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಮಿಚೆಲ್ ಮಾರ್ಷ್ ಅವರು ಫಿಟ್ನೆಸ್ನಿಂದ ಬಳಲುತ್ತಿರುವ ಕಾರಣ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಅನುಭವಿ ಆಲ್ರೌಂಡರ್ ಬ್ಯೂ ವೆಬ್‌ಸ್ಟರ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ದರ್ಜೆ ಕ್ರಿಕೆಟರ್ ಬ್ಯೂ ವೆಬ್ಸ್ಟರ್ಗೆ ಇದು ಚೊಚ್ಚಲ ಟೆಸ್ಟ್ ಪಂದ್ಯವಾಗಿದೆ.
30 ವರ್ಷದ ಈ ಆಲ್ ರೌಂಡರ್ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಅವರು 93 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 12 ಶತಕ ಮತ್ತು 24 ಅರ್ಧ ಶತಕಗಳೊಂದಿಗೆ 5,297 ರನ್ ಗಳಿಸಿದ್ದಾರೆ. ಅಲ್ಲದೇ ಬೌಲಿಂಗ್ನಲ್ಲೂ 148 ವಿಕೆಟ್‌ಗಳನ್ನು ಪಡೆದಿದ್ದಾರೆ. ಲಿಸ್ಟ್ - ಎ ಮತ್ತು ಟಿ20ಯಲ್ಲಿಯೂ ಅವರು ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 54 ಲಿಸ್ಟ್ - ಎ ಪಂದ್ಯಗಳಲ್ಲಿ 1317 ರನ್ ಮತ್ತು 44 ವಿಕೆಟ್ ಪಡೆದಿದ್ದರೇ, 89 ಟಿ-20 ಪಂದ್ಯಗಳನ್ನಾಡಿರುವ ಈ ಸ್ಟಾರ್ ಆಲ್ರೌಂಡರ್ 21 ವಿಕೆಟ್ ಪಡೆದಿದ್ದಾರೆ. ಒಟ್ಟಾರೆಯಾಗಿ, ಅವರು ದೇಶೀಯ ಕ್ರಿಕೆಟ್‌ನಲ್ಲಿ 8000 ಕ್ಕೂ ಹೆಚ್ಚು ರನ್ ಮತ್ತು 200+ ವಿಕೆಟ್‌ಗಳನ್ನು ಉರುಳಿಸಿದ್ದಾರೆ.