ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಮಹಿಳಾ ಟಿ20 ವಿಶ್ವಕಪ್ 2024ರ ಟೂರ್ನಿಗಾಗಿ ಬಲಿಷ್ಠ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಿದೆ. ಆಲ್ರೌಂಡರ್ ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಬಿಸಿಸಿಐ ಪ್ರಕಟಿಸಿದ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎಂಬುದರ ಕುರಿತಾದ ವಿವರ ಈ ಸುದ್ದಿಯಲ್ಲಿದೆ.
ಯುಎಇಯಲ್ಲಿ ಟಿ20 ವಿಶ್ವಕಪ್:ಅಕ್ಟೋಬರ್ 3 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಮಹಿಳಾ ಟಿ20 ವಿಶ್ವಕಪ್ ಆರಂಭಗೊಳ್ಳಲ್ಲಿದೆ. ಒಟ್ಟು 10 ತಂಡಗಳು ಟ್ರೋಫಿಗಾಗಿ ಸೆಣಸಲಿವೆ. ಈ ವಿಶ್ವ ಕೂಟಕ್ಕಾಗಿ ಇಂದು ಬಿಸಿಸಿಐ ಯುವ ಮತ್ತು ಅನುಭವಿ ಆಟಗಾರರನ್ನೊಳಗೊಂಡ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಹರ್ಮನ್ ಪ್ರೀತ್ ಕೌರ್ಗೆ ನಾಯಕಿ ಸ್ಥಾನ ನೀಡಲಾಗಿದ್ದು, ಆರ್ಸಿಬಿಯ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನಗೆ ಉಪನಾಯಕಿ ಜವಾಬ್ದಾರಿ ವಹಿಸಲಾಗಿದೆ.
ಶ್ರೇಯಾಂಕಾ ಪಾಟೀಲ್ ಸೇರಿ ಇವರಿಗೆಲ್ಲ ಮಹಿಳಾ ಟೀಂ ಇಂಡಿಯಾದಲ್ಲಿ ಸಿಕ್ಕಿದೆ ಸ್ಥಾನ:ವಿಕೆಟ್ ಕೀಪರ್ ಆಗಿ ರಿಚಾ ಘೋಷ್ ಮತ್ತು ಯಾಸ್ತಿಕಾ ಭಾಟಿಯಾ ಕೂಡ ತಂಡದಲ್ಲಿ ಸ್ಥಾನಪಡೆದಿದ್ದಾರೆ. ಕರ್ನಾಟಕದ ಯುವ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಪಂದ್ಯಾವಳಿ ಆರಂಭಕ್ಕೂ ಮುನ್ನ ಫಿಟ್ನೆಸ್ ಸಾಬೀತು ಪಡಿಸಬೇಕಾಗಿದೆ. ಏಷ್ಯಾಕಪ್ ಪಂದ್ಯಾವಳಿ ವೇಳೆ ಗಾಯಕ್ಕೆ ತುತ್ತಾದ ಬಳಿಕ ಒಂದೇ ಒಂದು ಪಂದ್ಯವನ್ನು ಶ್ರೇಯಾಂಕಾ ಪಾಟೀಲ್ ಆಡಿಲ್ಲ. ಈ ಹಿನ್ನೆಲೆ ಫಿಟ್ನೆಸ್ ಸಾಬೀತು ಪಡಿಸುವುದು ಅವರಿಗೆ ಅನಿವಾರ್ಯ ವಾಗಿದೆ.