'ತರ್ಲೆ ನನ್ಮಗ', 'ಶ್', 'ಸ್ವಸ್ತಿಕ್' ಹಾಗು 'ಓಂ' ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕರೆಂದು ಕರೆಸಿಕೊಂಡ ನಟ ಹಾಗು ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ. ನಂತರದಲ್ಲಿ 'ಎ', 'ಉಪೇಂದ್ರ', 'ಸೂಪರ್'ನಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯ ಮಾತ್ರವಲ್ಲದೇ ನಿರ್ದೇಶನವನ್ನೂ ಮಾಡಿರುವ ಅಭಿಮಾನಿಗಳ 'ಬುದ್ಧಿವಂತ ನಟ' ಉಪೇಂದ್ರ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ!.
ಇಂದು 57ನೇ ವಸಂತಕ್ಕೆ ಕಾಲಿಡುತ್ತಿರುವ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ 'ಯುಐ' ಸಿನಿಮಾದಿಂದ ಸರ್ಪ್ರೈಸ್ ಕೊಡುವುದರ ಜೊತೆಗೆ ಹಲವು ಸಿನಿಮಾಗಳು ಅನೌನ್ಸ್ ಆಗುತ್ತಿದೆ. ಸದ್ಯ ಯುಐ ಪೋಸ್ಟರ್ ಹಾಗು ಕತ್ತಲೆ ಇರುವ ಟೀಸರ್ನಿಂದಲೇ ಕುತೂಹಲ ಹುಟ್ಟಿಸಿರುವ ಯುಐ ಕುರಿತ ಹಲವು ವಿಚಾರಗಳ ಬಗ್ಗೆ ಉಪೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ.
ಯುಐ ಅಂದಾಕ್ಷಣ ಉಪೇಂದ್ರ ಅವರಿಗೆ ಏನು ನೆನಪಾಗುತ್ತೆ?: ಯುಐ ಟೈಟಲ್ ಹಾಗು ಮುಹೂರ್ತದಿಂದಲೇ ಕನ್ನಡ ಚಿತ್ರರಂಗವಲ್ಲದೆ ಪರಭಾಷೆಯಲ್ಲೂ ಮಾತಾಗಿರುವ ಯುಐ ಚಿತ್ರ ಅಂದಾಕ್ಷಣ ಉಪೇಂದ್ರ ಅವರಿಗೆ ಏನು ನೆನಪಾಗುತ್ತೆ ಗೊತ್ತಾ?. "ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯವರು ಕೂಡಾ ಈ ಸಿನಿಮಾ ಬಗ್ಗೆ ಮಾತನಾಡುವ ಹಾಗಾಗಬೇಕು. ಆ ಕಾರಣಕ್ಕೆ ರಾತ್ರಿ-ಹಗಲು ಯುಐ ಸಿನಿಮಾ ಬಗ್ಗೆ ಕೆಲಸಗಳಾಗ್ತಿವೆ" ಎಂಬುದು ಉಪೇಂದ್ರ ಅವರ ಮಾತು.
"ನನಗೆ ಹುಟ್ಟಹಬ್ಬವೆಂದರೆ ಅಭಿಮಾನಿಗಳೇ ನೆನಪಾಗುತ್ತಾರೆ. ಯಾಕೆಂದರೆ, ಬಾಲ್ಯ ನೆನಪಾಗುವಂತಹ ಹುಟ್ಟುಹಬ್ಬವನ್ನು ನಾನು ಆಚರಿಸಿಕೊಂಡಿಲ್ಲ. ಹುಟ್ಟುಹಬ್ಬವನ್ನೆಲ್ಲ ಅಭಿಮಾನಿಗಳೇ ಆಚರಿಸುತ್ತಿರುವುದು. ಹಾಗಾಗಿ ಅವರೇ ನೆನಪಾಗುತ್ತಾರೆ. ಅಭಿಮಾನಿಗಳಿಗೋಸ್ಕರ ನಾನು ದಿನ ಪೂರ್ತಿ ಹುಟ್ಟುಹಬ್ಬ ಆಚರಣೆ ಮಾಡುತ್ತೇನೆ. ಒಂದು ದಿನ ಇಡೀ ಬಿಡುವು ಮಾಡಿಕೊಳ್ಳುತ್ತೇನೆ. ಆ ದಿನ ಅಭಿಮಾನಿಗಳ ದಿನ ಆದಾಗ ನನಗೆ ಸಂತೋಷವಾಗುತ್ತದೆ. ಯಾಕೆಂದರೆ ನನ್ನ ಬೆಳವಣಿಗೆಯಲ್ಲಿ ಅಭಿಮಾನಿಗಳೇ ಮುಖ್ಯ" ಎಂಬುದು ಉಪ್ಪಿ ಮಾತು.
ಯುಐ ಸಿನಿಮಾ ತಡವಾಗಲು ಕಾರಣವೇನು?: "ನಾನು ಈ ಸಿನಿಮಾದ ಕಥೆ ಮಾಡುವಾಗ ಪ್ಯಾನ್ ಇಂಡಿಯಾ ಸಿನಿಮಾ ಅಂತಾ ಅಂದುಕೊಂಡಿರಲಿಲ್ಲ. ಕಥೆ ಹೇಳಿದಾಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹಾಗು ಕಾರ್ಯಕಾರಿ ನಿರ್ಮಾಪಕ ನವೀನ್ ಪ್ಯಾನ್ ಇಂಡಿಯಾ ಮಾಡಬಹುದು ಎಂದು ಡಿಸೈಡ್ ಮಾಡಿದ್ರು. ಈ ಸಿನಿಮಾ ವಿಎಫ್ಎಕ್ಸ್ ಕೆಲಸ ಹೆಚ್ಚಾಗಿದೆ. ಹಾಗೆಯೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಅಂದರೆ ಚಿತ್ರದ ಮೇಕಿಂಗ್ ಸ್ಟೈಲ್ ಕೂಡ ವಿಭಿನ್ನವಾಗಿದೆ. ಹಾಗಾಗಿ ಸಮಯ ತೆಗೆದುಕೊಳ್ಳುತ್ತದೆ" ಎಂದು ಉಪ್ಪಿ ಜಾಣ್ಮೆಯ ಉತ್ತರ ಕೊಟ್ಟರು.
ಹಿರಿಯ ನಟ ರಜನಿಕಾಂತ್ ಅವರೊಂದಿಗೆ ಅಭಿನಯಿಸಿದ ಕ್ಷಣಗಳು ಹೇಗಿದ್ದವು?: "ರಜನಿಕಾಂತ್ ಸರ್ ಜೊತೆ ಅಭಿನಯಿಸಿದ್ದು ನನ್ನ ಜೀವನದಲ್ಲಿ ಮರೆಯಲಾಗದ್ದು. ಅದ್ಭುತ, ಅದು ಅವಿಸ್ಮರಣೀಯ ದಿನ" ಎಂಬುದು ಉಪೇಂದ್ರ ಅವರ ಅಭಿಮಾನದ ಮಾತು.
ಕನ್ನಡ ಸಿನಿಮಾ ಇಂಡಸ್ಟ್ರಿಗೆ 'ಫೈರ್' ಕಮಿಟಿ ಬೇಕಾ?: ಮಲಯಾಳಂ ಚಿತ್ರರಂಗದಂತೆ ಕನ್ನಡ ಚಿತ್ರರಂಗದಲ್ಲಿಯೂ ಫೈರ್ ಕಮಿಟಿ ಆಗಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿರುವ ಬಗ್ಗೆ ಮಾತನಾಡಿ, "ನನ್ನ ಅಭಿಪ್ರಾಯಕ್ಕಿಂತ, ಯಾರು ಅನ್ಯಾಯಕ್ಕೊಳ್ಳಗಾಗಿದ್ದಾರೋ ಅವರು ಮಾತನಾಡಬೇಕು. ಅವರಿಗೆ ಒಂದು ವೇದಿಕೆ ಸೃಷ್ಟಿಯಾಗಬೇಕು. ಅದಕ್ಕಂತ ಕನ್ನಡ ಫಿಲ್ಮ್ ಚೇಂಬರ್ ಹಾಗೂ ಪೊಲೀಸ್, ಕಾನೂನು ಎಲ್ಲವೂ ಇವೆ. ಎಲ್ಲೋ ಕೆಲವೊಂದು ಹುದುಗಿ ಹೋದಂತಿದೆ. ಅದಕ್ಕೆ ಇನ್ನೊಂದು ಕಮಿಟಿ ಮಾಡಬೇಕು ಅಂತಿದ್ದಾರೆ. ಅದನ್ನು ನಾನು ಸ್ವಾಗತಿಸುತ್ತೇನೆ. ಅವರಿಗೆ ಬೇರೇನೆ ಬೇಕು ಅಂದ್ರೆ ಮಾಡ್ಕೋಬಹುದು. ಇಲ್ಲ ಇರುವುದನ್ನೇ ಬಳಸಿಕೊಳ್ಳಬಹುದು. ಅನ್ಯಾಯ ಆದವರಿಗೆ ಆದಷ್ಟು ಬೇಗ ನ್ಯಾಯ ಸಿಗಬೇಕು" ಎಂದರು.
"ಆ ಥರ ಕಿರುಕುಳ ಆಗಿದ್ದರೆ ದಯವಿಟ್ಟು ಮಾತನಾಡಿ. ಎಷ್ಟೇ ಕಮಿಟಿಗಳಿರಬಹುದು, ಏನೇ ಇರಬಹುದು. ಮೊದಲು ಅನ್ಯಾಯಕ್ಕೊಳಗಾದವರು ಮಾತನಾಡಬೇಕು. ಅಂತಿಮವಾಗಿ ನೀವೆಷ್ಟು ಗಟ್ಟಿಯಾಗಿರ್ತೀರಾ? ನೀವು ಎಷ್ಟು ಧೈರ್ಯವಾಗಿ ಎದುರಿಸುತ್ತೀರಾ ಎನ್ನುವುದು ಮುಖ್ಯ. ಖಂಡಿತವಾಗಿಯೂ ಎಲ್ಲರೂ ನಿಮ್ಮ ಜೊತೆ ಇರುತ್ತಾರೆ. ಕಿರುಕುಳ ಆದಾಗಲೇ ಮಾತನಾಡಿ, ಹೇಳುವುದರಿಂದ ವೃತ್ತಿ ಜೀವನಕ್ಕೆ ಸಮಸ್ಯೆ ಆಗಬಹುದಾ ಎಂದು ಯೋಚನೆ ಮಾಡುತ್ತಾರೆ. ಆ ಥರ ಯೋಚನೆ ಮಾಡಿ ಅನ್ಯಾಯವನ್ನು ಮುಚ್ಚಿಟ್ಟುಕೊಳ್ಳುವುದು ಬೇಡ. ರಿಯಲ್ ಸಿನಿಮಾ ಮೇಕರ್ಸ್ ಅದ್ಯಾವುದನ್ನೂ ನೋಡುವುದಿಲ್ಲ. ಕೇವಲ ನಿಮ್ಮ ಪ್ರತಿಭೆಯನ್ನಷ್ಟೆ ನೋಡುತ್ತಾರೆ. ಕೇವಲ ಮಹಿಳೆಯರು ಮಾತ್ರವಲ್ಲ, ಗಂಡಸರು ಕೂಡ ಬೇರೆ ಬೇರೆ ರೀತಿಯಲ್ಲಿ ಸಫರ್ ಆಗುತ್ತಾರೆ. ಅವುಗಳನ್ನೆಲ್ಲ ಮೆಟ್ಟಿ ಮುಂದೆ ಬರಲೇಬೇಕು" ಎಂದು ತಿಳಿಸಿದರು.
ಉಪೇಂದ್ರ ಅವರಿಗೆ ಸ್ಟಾರ್ ಅಂದ್ರೆ ಯಾರು?: "ಕಥೆ, ಸ್ಕ್ರೀನ್ ಪ್ಲೇ, ಕಂಟೆಂಟ್ ಅವುಗಳೇ ಸ್ಟಾರ್. ಯಾವತ್ತೂ ಸತ್ಯ ಅದು. ಯಾವುದೇ ಸಿನಿಮಾ ರಂಗದಲ್ಲಿ ಸ್ಟಾರ್ಗಳು ಹುಟ್ಟುವುದು ಒಂದು ಅದ್ಭುತವಾದ ಕಥೆ ಹಾಗು ಆ ಸಿನಿಮಾ ಸಕ್ಸಸ್ನಿಂದ. ಇಲ್ಲಿ ಯಾರೂ ಸ್ಟಾರ್ಗಳು ಆಗಲ್ಲ.
ನಿಮ್ಮ ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಬರ್ತಾರೆಯೇ?: "ಸಿನಿಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ಅವರ ಮೇಲೆ ಯಾವುದೇ ಒತ್ತಡವಿಲ್ಲ. ಅವರು ಬೆಳೆದ ಮೇಲೆ ಅವರ ಮನಸ್ಸಲ್ಲೇ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದೆನಿಸಿದರೆ ಆಗ ಮಾತ್ರ ಅದು ಸತ್ಯ" ಎಂದರು.
ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ನಿಮ್ಮ ಪ್ರತಿಕ್ರಿಯೆ?: "ಸಿನಿಮಾರಂಗ ಒಂದು ಕುಟುಂಬ ಇದ್ದಂತೆ. ಈ ವಿಷಯ ನಮಗೆ ತುಂಬಾ ನೋವು ತಂದಿದೆ. ಸದ್ಯ ಪ್ರಕರಣದ ಕುರಿತು ಕಾನೂನು ರೀತಿಯಲ್ಲಿ ತನಿಖೆ ಆಗುತ್ತಿದೆ. ನೋಡೋಣ" ಎಂದು ಉಪೇಂದ್ರ ಸೂಕ್ಷ್ಮವಾಗಿ ಉತ್ತರಿಸಿದರು.
ಯುಐ ಸಿನಿಮಾ ಬಗ್ಗೆ ನಿಮ್ಮ ಅಭಿಮಾನಿಗಳಿಗೆ ಏನಂತೀರಿ?: "ಯುಐ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ನಾನು ಹೇಳುವುದಲ್ಲ. ಸಿನಿಮಾದ ಬಗ್ಗೆ ಅಭಿಮಾನಿಗಳು ಹೇಳಬೇಕು. ಸಿನಿಮಾದಲ್ಲಿ ಏನಿದೆ ಎನ್ನುವುದನ್ನು ಅವರು ಡಿಕೋಡ್ ಮಾಡಬೇಕು. ಒಂದೊಂದು ಸೀನ್ನಲ್ಲೂ ಒಂದೊಂದು ವಿಷಯ ಇದೆ. ಪ್ರೇಕ್ಷಕರು ನಿಜವಾಗಿಯೂ ತುಂಬಾ ಬುದ್ಧಿವಂತರಿದ್ದಾರೆ. ಸಿನಿಮಾದ ಬಗ್ಗೆ ಅವರು ಏನು ಹೇಳುತ್ತಾರೆ, ಪ್ರತಿಕ್ರಿಯೆ ಹೇಘಿರುತ್ತದೆ ಎನ್ನುವುದರ ಬಗ್ಗೆ ನನಗೆ ತುಂಬಾ ಕುತೂಹಲ ಇದೆ" ಅಂತಾರೆ ಉಪೇಂದ್ರ.
ಇನ್ನು "ನನ್ನನ್ನು ಬುದ್ಧಿವಂತ ನಟ ಹಾಗು ನಿರ್ದೇಶಕ ಅಂತ ಕರೆಯುವುದು ನಿಮ್ಮ ದೊಡ್ಡ ಗುಣ. ನಾನೇನು ಅಂತ ನನಗೆ ಗೊತ್ತಲ್ಲ" ಎಂದು ನಗುತ್ತಾ ಅಣ್ಣಾವ್ರ ಸ್ಟೈಲಲ್ಲೇ ಹೇಳಿದರು.
ಯುಐ 100 ಕೋಟಿ ರೂ ಬಿಗ್ ಬಜೆಟ್ನಲ್ಲಿ ತಯಾರಾಗುತ್ತಿದೆ. ಕೆ.ಪಿ.ಶ್ರೀಕಾಂತ್ ಹಾಗು ಮನೋಹರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ: ನಿಷೇಧ ತೆರವುಗೊಂಡ ಬೆನ್ನಲ್ಲೇ ಸೌತ್ ಸೂಪರ್ಸ್ಟಾರ್ ಧನುಷ್ ಹೊಸ ಸಿನಿಮಾ ಅನೌನ್ಸ್ - Dhanush New Movie