ನವದೆಹಲಿ: ಮಲೇಷ್ಯಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಅಜೇಯವಾಗಿ ಫೈನಲ್ ತಲುಪಿ ವಿಶ್ವಕಪ್ ಗೆದ್ದುಕೊಂಡಿದೆ.
ಭಾನುವಾರ ಕೌಲಲಾಂಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಆಲ್‌ರೌಂಡರ್ ಪ್ರದರ್ಶನ ನೀಡಿತು. ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಲ್ಪಮೊತ್ತಕ್ಕೆ ಕುಸಿದಿತ್ತು. ಭಾರತದ ಗೊಂಗಡಿ ತ್ರಿಷಾ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ತಂಡಕ್ಕೆ ಶಾಕ್ ನೀಡಿದರು. ಆಫ್ರಿಕನ್ನರು ನೀಡಿದ ಸಾಮಾನ್ಯ ಗುರಿ ಬೆನ್ನತ್ತಿದ ಭಾರತ 11.2 ಓವರ್ಗಳಲ್ಲಿ ಗುರಿ ತಲುಪಿ ವಿಶ್ವಕಪ್ ತನ್ನದಾಗಿಸಿತು.
5 ಕೋಟಿ ರೂ ಬಹುಮಾನ: ಸತತ ಎರಡನೇ ಬಾರಿಗೆ ಅಂಡರ್19 ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 5 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಈ ಕುರಿತು ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ, "ಗಮನಾರ್ಹ ಸಾಧನೆ ಮಾಡಿದ ಮಹಿಳಾ ತಂಡ, ಮುಖ್ಯ ಕೋಚ್ ಮತ್ತು ಹೆಡ್ ಕೋಚ್ ಅವರನ್ನು ಬಿಸಿಸಿಐ ಅಭಿನಂದಿಸುತ್ತದೆ. ತಂಡದ ಅಭೂತಪೂರ್ವ ಪ್ರದರ್ಶನಕ್ಕೆ 5 ಕೋಟಿ ರೂ ಬಹುಮಾನ ಘೋಷಿಸಲಾಗುತ್ತಿದೆ" ಎಂದು ತಿಳಿಸಿದೆ.
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮಹಿಳಾ ತಂಡವನ್ನು ಅಭಿನಂದಿಸಿದ್ದು, "ವಿಶ್ವಕಪ್ ಗೆದ್ದ ನಮ್ಮ ಹುಡುಗಿಯರಿಗೆ ಅಭಿನಂದನೆಗಳು. ಈ ಟ್ರೋಫಿ ಭಾರತದಲ್ಲಿ ಮಹಿಳಾ ಕ್ರಿಕೆಟ್‌ನ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಮತ್ತು ಪ್ರತಿಯೊಬ್ಬ ಆಟಗಾರ್ತಿಯ ಪ್ರದರ್ಶನವೂ ನನಗೆ ತುಂಬಾ ಖುಷಿ ನೀಡಿದೆ" ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅಭಿನಂದನೆ:ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮಹಿಳಾ ತಂಡವನ್ನು ಅಭಿನಂದಿಸಿದ್ದಾರೆ 'X' ನಲ್ಲಿ ಪೋಸ್ಟ್ ಮಾಡಿದ ಅವರು, "2025ರ ಐಸಿಸಿ ಅಂಡರ್19 ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಅಭಿನಂದನೆಗಳು. ನಮ್ಮ ನಾರಿ ಶಕ್ತಿಯ ಬಗ್ಗೆ ತುಂಬಾ ಹೆಮ್ಮೆ ಇದೆ. ಇದು ನಮ್ಮ ತಂಡದ ಅತ್ಯುತ್ತಮ ಪ್ರದರ್ಶನ ಮತ್ತು ತಾಳ್ಮೆಯ ಆಟದ ಫಲಿತಾಂಶ. ಅನೇಕ ಉದಯೋನ್ಮುಖ ಕ್ರೀಡಾಪಟುಗಳಿಗೆ ಈ ಸಾಧನೆ ಸ್ಫೂರ್ತಿ ನೀಡುತ್ತದೆ" ಎಂದು ಹೇಳಿದ್ದಾರೆ.
ಪಂದ್ಯದ ಹೈಲೈಟ್ಸ್:ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ದ.ಆಫ್ರಿಕಾ 82 ರನ್ಗಳಿಗೆ ಆಲೌಟ್ ಆಯಿತು. ಸಾಮಾನ್ಯ ಗುರಿ ಬೆನ್ನತ್ತಿದ ಭಾರತ ಒಂದು ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವು ಸಾಧಿಸಿತು. ಆಲ್‌ರೌಂಡರ್ ಪ್ರದರ್ಶನ ನೀಡಿದ ಗೊಂಗಾಡಿ ತ್ರಿಷಾ, ಬೌಲಿಂಗ್ನಲ್ಲಿ 3 ವಿಕೆಟ್ ಉರುಳಿಸಿದರೆ ಬ್ಯಾಟಿಂಗ್ನಲ್ಲಿ 44 ರನ್ ಕಲೆಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ:ಟಿ-20ಯಲ್ಲಿ ಇತಿಹಾಸ ಸೃಷ್ಟಿಸಿದ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟರ್!