ಮುಂಬೈ(ಮಹಾರಾಷ್ಟ್ರ): ಮುಂಬರುವ 2024 - 25ರ ದೇಶೀಯ ಕ್ರಿಕೆಟ್ ಋತುವಿಗಾಗಿ ಬಿಸಿಸಿಐ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಅದರಂತೆ ದೇಶೀಯ ಕ್ರಿಕೆಟ್‌ನ ಪ್ರಮುಖ ಟೂರ್ನಿ ರಣಜಿ ಟ್ರೋಫಿ ಎರಡು ಹಂತಗಳಲ್ಲಿ ನಡೆಯಲಿದೆ. ಇನ್ನು ಎರಡು ರಣಜಿ ಟ್ರೋಫಿ ಪಂದ್ಯಗಳ ನಡುವೆ ಆಟಗಾರರಿಗೆ ಹೆಚ್ಚು ದಿನ ವಿಶ್ರಾಂತಿ ನೀಡುವ ಮೂಲಕ ಆಟಗಾರರ ವರ್ಕ್‌ಲೋಡ್ ಮ್ಯಾನೇಜ್ ಮಾಡಲು ಬಿಸಿಸಿಐ ನಿರ್ಧಾರ ಮಾಡಿದೆ. 2024 - 25ರ ದೇಶೀಯ ಋತುವಿನ ದಿನಾಂಕಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ಅಧಿಕೃತವಾಗಿ ಘೋಷಿಸದಿದ್ದರೂ, ಅಂದು ಕೆಲವು ಹೊಸ ಸುಧಾರಣೆಗಳಿಗೆ ನಾಂದಿಯಾಗಲಿದೆ.
"ರಾಷ್ಟ್ರೀಯ ಆಯ್ಕೆದಾರರು ಆಯ್ಕೆ ಮಾಡಿದ ನಾಲ್ಕು ತಂಡಗಳನ್ನು ಒಳಗೊಂಡಿರುವ ದುಲೀಪ್ ಟ್ರೋಫಿ ಪಂದ್ಯಾವಳಿಯೊಂದಿಗೆ ಸೀಸನ್ ಪ್ರಾರಂಭವಾಗಲಿದೆ. ಇದರ ಬೆನ್ನಲ್ಲೇ ಇರಾನಿ ಕಪ್ ಟೂರ್ನಿ ನಡೆಯಲಿದೆ. ಇವುಗಳ ನಂತರ, ಎರಡು ಪಂದ್ಯಾವಳಿಗಳು ನಡೆಯಲಿವೆ. ರಣಜಿ ಟ್ರೋಫಿಯ ಮೊದಲ ಐದು ಲೀಗ್ ಪಂದ್ಯಗಳು (ಪ್ರತಿ ತಂಡಕ್ಕೆ), ನಂತರ T20 ಸ್ಪರ್ಧೆ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು 50 ಓವರ್ ಪಂದ್ಯಾವಳಿ, ವಿಜಯ್ ಹಜಾರೆ ಟ್ರೋಫಿ. ನಂತರ ರಣಜಿ ಟ್ರೋಫಿ ಮತ್ತು ನಾಕೌಟ್ ಹಂತಗಳ ಉಳಿದ ಎರಡು ಲೀಗ್ ಪಂದ್ಯಗಳೊಂದಿಗೆ ಸೀಸನ್ ಮುಕ್ತಾಯಗೊಳ್ಳಲಿದೆ" ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
"ಹೊಸ ಅಂಕಗಳ ವ್ಯವಸ್ಥೆಯ ಪರಿಣಾಮಕಾರಿತ್ವ ನಿರ್ಣಯಿಸಲು ಋತುವಿನ ಕೊನೆಯಲ್ಲಿ ವಿಮರ್ಶೆ ನಡೆಸಲಾಗುವುದು, ಮುಂದಿನ ಋತುವಿನಲ್ಲಿ ರಣಜಿ ಟ್ರೋಫಿಯಲ್ಲಿ ಇದನ್ನು ಜಾರಿಗೆ ತರಬೇಕೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಲ್ಲದೇ, ಸಿ.ಕೆ. ನಾಯ್ಡು ಟ್ರೋಫಿಯಲ್ಲಿ ಅತ್ಯಂತ ಮಹತ್ವದ ಸಂಗತಿಯನ್ನು ಪ್ರಸ್ತಾಪ ಮಾಡಲಾಗಿದೆ. ಇಲ್ಲಿ ಟಾಸ್ ಪ್ರಕ್ರಿಯೆ ಇರೋದಿಲ್ಲ. ಪ್ರವಾಸಿ ತಂಡಕ್ಕೆ ಬ್ಯಾಟಿಂಗ್ ಅಥವಾ ಬೌಲಿಂಗ್‌ನ ಆಯ್ಕೆಯನ್ನು ನೀಡಲಾಗುತ್ತದೆ. ಅಲ್ಲದೇ, ಏಕದಿನ, T20 ಮತ್ತು ಟೆಸ್ಟ್ ಸೇರಿದಂತೆ ಎಲ್ಲ ಮಹಿಳಾ ಇಂಟರ್‌ಜೋನಲ್ ಪಂದ್ಯಾವಳಿಗಳಲ್ಲಿ ರಾಷ್ಟ್ರೀಯ ಆಯ್ಕೆದಾರರು ತಂಡಗಳನ್ನು ಆಯ್ಕೆ ಮಾಡುತ್ತಾರೆ" ಎಂದು ಹೇಳಿದ್ದಾರೆ.
ಭಾರತ ಪುರುಷರ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಪುರುಷರ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಭಾರತದ ಮಾಜಿ ವೇಗಿ ಅಬೆ ಕುರುವಿಲ್ಲಾ ಅವರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯು ದೇಶೀಯ ಕ್ರಿಕೆಟ್‌ನಲ್ಲಿ ಸುಧಾರಣೆಗಳನ್ನು ತರಲು ಈ ಶಿಫಾರಸುಗಳನ್ನು ನೀಡಿದೆ. ಈ ಸುಧಾರಣೆಗಳನ್ನು ಅನುಷ್ಠಾನಗೊಳಿಸಲು ಬಿಸಿಸಿಐ ಅಪೆಕ್ಸ್ ಕೌನ್ಸಿಲ್‌ನ ಅನುಮೋದನೆ ಅಗತ್ಯವಿದೆ. ವರ್ಕಿಂಗ್ ಗ್ರೂಪ್‌ನ ಶಿಫಾರಸುಗಳನ್ನು ದೇಶೀಯ ಕ್ರಿಕೆಟ್‌ನಲ್ಲಿ ಅಳವಡಿಸಲಾಗುವುದು, ಇದು ಅಪೆಕ್ಸ್ ಕೌನ್ಸಿಲ್‌ನ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಶಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸ್ಲೋ ಓವರ್ ರೇಟ್: ಆರ್ಸಿಬಿ ವಿರುದ್ಧ ನಾಳೆ ನಡೆಯಲಿರುವ ಪಂದ್ಯದಿಂದ ರಿಷಭ್ ಔಟ್, 30 ಲಕ್ಷ ರೂ. ದಂಡ - Rishabh Pant Suspend