SMAT 2024: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಭಾಗವಾಗಿ ಇಂದು ನಡೆದ ಬರೋಡಾ ಮತ್ತು ಸಿಕ್ಕಿಂ ತಂಡಗಳ ನುಡವಿನ ಟಿ20 ಪಂದ್ಯದಲ್ಲಿ ಕೃನಾಲ್ ಪಾಂಡ್ಯ ನೇತೃತ್ವದ ಬರೋಡಾ ವಿಶ್ವದಾಖಲೆ ನಿರ್ಮಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಬರೋಡಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿತು. ಇದರೊಂದಿಗೆ ಒಟ್ಟಾರೆ ಟಿ20 ಸ್ವರೂಪದಲ್ಲಿ ಅತೀ ಹೆಚ್ಚು ಸ್ಕೋರ್ ದಾಖಲಿಸಿದ ತಂಡವಾಗಿ ಇತಿಹಾಸ ನಿರ್ಮಿಸಿತು.
ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ ಈ ದಾಖಲೆ ಜಿಂಬಾಬ್ವೆ ಹೆಸರಿನಲ್ಲಿತ್ತು. ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಜಿಂಬಾಬ್ವೆ ಜಾಂಬಿಯಾ ವಿರುದ್ಧ 344 ರನ್ ಗಳಿಸಿತ್ತು. ಇದೀಗ ಬರೋಡಾ ಈ ದಾಖಲೆ ಮುರಿದು ಹಾಕಿದೆ. ಬರೋಡಾ ಪರ, ಭಾನು ಪಾನಿಯಾ ಕೇವಲ 51 ಎಸೆತಗಳಲ್ಲಿ 5 ಬೌಂಡರಿ ಮತ್ತು 15 ಸಿಕ್ಸರ್‌ಗಳೊಂದಿಗೆ 134 ರನ್ ಸಿಡಿಸಿದರು.
ಜೊತೆಗೆ, ಶಾಶ್ವತ್ ರಾವತ್ (16 ಎಸೆತಗಳಲ್ಲಿ 43), ಅಭಿಮನ್ಯು ಸಿಂಗ್ (17 ಎಸೆತಗಳಲ್ಲಿ 53), ಶಿವಾಲಿಕ್ ಶರ್ಮಾ (17 ಎಸೆತಗಳಲ್ಲಿ 55) ಮತ್ತು ವಿಷ್ಣು ಸೋಲಂಕಿ (16 ಎಸೆತಗಳಲ್ಲಿ 50) ಆಕ್ರಮಣಕಾರಿ ಆಟವಾಡಿದರು. ಸಿಕ್ಕಿಂ ಬೌಲರ್‌ಗಳಾದ ಪಲ್ಜೋರ್ ತಮಾಂಗ್ ಮತ್ತು ರೋಷನ್ ಕುಮಾರ್ ಎರಡು ವಿಕೆಟ್ ಪಡೆದರು. ತರುಣ್ ಶರ್ಮಾ ಒಂದು ವಿಕೆಟ್ ಉರುಳಿಸಿದರು.