ರಾವಲ್ಪಿಂಡಿ: ಪಾಕಿಸ್ತಾನ ವಿರುದ್ಧದ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ 10 ವಿಕೆಟ್‌ಗಳಿಂದ ಜಯಭೇರಿ ಬಾರಿಸಿ ಐತಿಹಾಸಿಕ ಗೆಲುವು ದಾಖಲಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲೇ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶದ ಮೊದಲ ಗೆಲುವು ಇದಾಗಿದೆ. ಐದನೇಯ ದಿನದಾಟದಂದು ಪಾಕ್ ನೀಡಿದ್ದ 30 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ ವಿಕೆಟ್ ನಷ್ಟವಿಲ್ಲದೇ ಪಂದ್ಯವನ್ನು ಗೆದ್ದುಕೊಂಡಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ಕೆಟ್ಟ ಆರಂಭವನ್ನು ಪಡೆದಿತ್ತು. 16 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ, ಸೌದ್ ಶಕೀಲ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಶತಕಗಳ ನೆರವಿನಿಂದ ಪಾಕಿಸ್ತಾನ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 448 ರನ್‌ಗಳ ದೊಡ್ಡ ಮೊತ್ತವನ್ನು ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ವಿಕೆಟ್ ಕೀಪರ್ ಮೊಹ್ಮದ್ ರಿಜ್ವಾನ್ 11 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ನೆರವಿನಿಂದ ಅಜೇಯವಾಗಿ 171 ರನ್ ಗಳಿಸಿದರೇ, ಸೌದ್ ಶಕೀಲ್ 9 ಬೌಂಡರಿ ನೆರವಿನಿಂದ 141 ರನ್ ಕಲೆಹಾಕಿದರು. ಬಾಂಗ್ಲಾದೇಶ ಪರ ಹಸನ್ ಮಹಮೂದ್ ಮತ್ತು ಶೋರಿಫುಲ್ ಇಸ್ಲಾಂ ತಲಾ 2 ವಿಕೆಟ್ ಪಡೆದು ಮಿಂಚಿದರು.
ಬಳಿಕ ಬಾಂಗ್ಲಾದೇಶ ಕೂಡ ಭರ್ಜರಿ ಪ್ರದರ್ಶನ ತೋರಿ ಮೊದಲ ಇನ್ನಿಂಗ್ಸ್‌ನಲ್ಲಿ 565ರನ್ ಗಳಿಸಿತ್ತು. ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ 117 ರನ್‌ಗಳ ಮುನ್ನಡೆ ಸಾಧಿಸಿತು. ತಂಡದ ಪರ ಮುಶ್ಫಿಕರ್ ರಹೀಮ್ 191 ರನ್‌ಗಳ ಇನಿಂಗ್ಸ್ ಆಡಿದರು. ಇದು ರಹೀಮ್ ಅವರ ಟೆಸ್ಟ್ ವೃತ್ತಿ ಜೀವನದ 11ನೇ ಶತಕವಾಗಿತ್ತು. ರಹೀಮ್ ತಮ್ಮ ಇನ್ನಿಂಗ್ಸ್‌ನಲ್ಲಿ 22 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು. ಉಳಿದಂತೆ ಶಾದ್ಮನ್ ಇಸ್ಲಾಂ (97), ಮಹೇದಿ ಹಸನ್ ಮಿರಾಜ್ (77), ಲಿಟನ್ ದಾಸ್ (56) ಮತ್ತು ಮೊಮಿನುಲ್ ಹಕ್ ಅರ್ಧಶತಕಗಳ ಕೊಡುಗೆ ನೀಡಿದರು. ಪಾಕಿಸ್ತಾನ ಪರ ನಸೀಮ್ ಶಾ ಮೂರು ವಿಕೆಟ್ ಪಡೆದರೇ ಖುರ್ರಂ ಶಹಜಾದ್, ಮೊಹಮ್ಮದ್ ಅಲಿ ಮತ್ತು ಶಾಹೀನ್ ಅಫ್ರಿದಿ ತಲಾ 2 ವಿಕೆಟ್ಗಳನ್ನು ಉರುಳಿಸಿದರು.