ಪ್ಯಾರಿಸ್:ಬುಧವಾರ ಇಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್ ಫೈನಲ್ ಹಣಾಹಣಿಯಲ್ಲಿ ಭಾರತ ಹಿನ್ನಡೆ ಅನುಭವಿಸಿತು. ವೇಗ ಕಾಪಾಡಿಕೊಳ್ಳುವಲ್ಲಿ ವಿಫಲರಾದ ಭಾರತದ ಅವಿನಾಶ್ ಸೇಬಲ್ 11ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಸ್ಪರ್ಧೆಯ ಆರಂಭದ ಕೆಲ ಸಮಯ ಮುನ್ನಡೆಯಲ್ಲಿದ್ದ ಅವಿನಾಶ್, ಬಳಿಕ ಅಂತಿಮ ಗೆರೆಯನ್ನು ದಾಟಲು 8 ನಿಮಿಷ 14.18 ಸೆಕೆಂಡುಗಳನ್ನು ತೆಗೆದುಕೊಂಡರು. ಮೊರೊಕ್ಕೊದ ಸೌಫಿಯಾನ್ ಎಲ್ ಬಕ್ಕಲಿ ಅವರು ತಮ್ಮ ಋತುವಿನ ಅತ್ಯುತ್ತಮ 8:06.05 ಸಮಯದಲ್ಲೇ ಗುರಿ ತಲುಪಿ, ಚಿನ್ನದ ಪದಕವನ್ನು ತಮ್ಮಲ್ಲೇ ಉಳಿಸಿಕೊಂಡರು. ಇನ್ನುಳಿದಂತೆ, ಯುಎಸ್ಎಯ ಕೆನೆತ್ ರೂಕ್ಸ್ (8:06.41) ಮತ್ತು ಕೀನ್ಯಾದ ಅಬ್ರಹಾಂ ಕಿಬಿವೊಟ್ (8:06.47) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು. ವಿಶ್ವ ದಾಖಲೆ ಹೊಂದಿರುವ ಇಥಿಯೋಪಿಯಾದ ಲಾಮೆಚಾ ಗಿರ್ಮಾ ಅವರು ಓಟವನ್ನು ಪೂರ್ಣಗೊಳಿಸಲು ವಿಫಲರಾದರು. ಸ್ಪರ್ಧೆ ವೇಳೆ ಅಂತ್ಯದ ಸಮೀಪ ಟ್ರ್ಯಾಕ್‌ನಲ್ಲೇ ಎಡವಿ ಬಿದ್ದರು.
ಅವಿನಾಶ್ ಸೇಬಲ್ ಇತ್ತೀಚೆಗೆ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ 8: 09.91 ಸೆಕೆಂಡುಗಳಲ್ಲಿ ಓಡುವ ಮೂಲಕ ತಮ್ಮದೇ ರಾಷ್ಟ್ರೀಯ ಸ್ಟೀಪಲ್‌ಚೇಸ್ ದಾಖಲೆಯನ್ನು ಮುರಿದಿದ್ದರು. ಪ್ಯಾರಿಸ್ ಕ್ರೀಡಾಕೂಟಕ್ಕೆ ಸರ್ಕಾರದ ಧನಸಹಾಯದೊಂದಿಗೆ ತಯಾರಿ ನಡೆಸಿದ್ದ ಅವರು ದೀರ್ಘಕಾಲದಿಂದ ವಿದೇಶದಲ್ಲಿಯೇ ತರಬೇತಿ ಪಡೆದಿದ್ದರು.
ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ: ಅವಿನಾಶ್ ಒಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ವಿಫಲವಾದರೂ ಕೂಡ 8:14:18 ವೇಗದ ಮೂಲಕ 2025ರ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡರು. ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತೆ ಪಡೆಯಲು 8:15:00 ನಿಮಿಷಗಳ ನಿಯಮವಿದೆ.