Indian Cricket Team: ಬಾರ್ಡರ್-ಗವಾಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ 2ನೇ ಟೆಸ್ಟ್ ಪಂದ್ಯ(ಪಿಂಕ್ ಬಾಲ್ ಟೆಸ್ಟ್) ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಡಿಸೆಂಬರ್ 6ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 30ರಿಂದ(ನಾಳೆಯಿಂದ) ಎರಡು ದಿನಗಳ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಅಭ್ಯಾಸ ಪಂದ್ಯ ನಡೆಯಲಿದೆ. ಈ ಅಭ್ಯಾಸ ಪಂದ್ಯಕ್ಕೂ ಮುನ್ನ ಗುರುವಾರ ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಭಾರತ ಕ್ರಿಕೆಟ್ ತಂಡವನ್ನು ಭೇಟಿ ಮಾಡಿ, ಭೋಜನ ಕೂಟ ಆಯೋಜಿಸಿ ಮಾತುಕತೆ ನಡೆಸಿದರು.
ಇದಕ್ಕೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಸದಸ್ಯರನ್ನು ಆಸೀಸ್ ಪ್ರಧಾನಿಗೆ ಪರಿಚಯಿಸಿದರು.
'ನನ್ನ ಆತ್ಮೀಯ ಸ್ನೇಹಿತ..'-ಪ್ರಧಾನಿ ಮೋದಿ ಸಂತಸ: ಭಾರತ ತಂಡವನ್ನು ಆಸ್ಟ್ರೇಲಿಯಾ ಭೇಟಿ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಬನೀಸ್ ಟ್ವೀಟ್ ಹಂಚಿಕೊಂಡಿರುವ ಮೋದಿ, "ನನ್ನ ಆತ್ಮೀಯ ಸ್ನೇಹಿತ ಆಂಥೋನಿ ಅಲ್ಬನೀಸ್ ಭಾರತ ಮತ್ತು ಪ್ರೆಸಿಡೆಂಟ್ಸ್ ಇಲೆವೆನ್ ತಂಡವನ್ನು ಭೇಟಿ ಮಾಡಿರುವುದು ಸಂತೋಷ ತಂದಿದೆ. ಭಾರತ ಈ ಸರಣಿಯಲ್ಲಿ ಗೆಲುವಿನ ಆರಂಭ ಪಡೆದಿದೆ. 140 ಕೋಟಿ ಭಾರತೀಯರು ಮೆನ್ ಇನ್ ಬ್ಲೂವನ್ನು ಬೆಂಬಲಿಸುತ್ತಿದ್ದಾರೆ. ಮುಂಬರುವ ಪಂದ್ಯಗಳಿಗಾಗಿ ಉತ್ಸುಕನಾಗಿದ್ದೇನೆ" ಎಂದು ಬರೆದಿದ್ದಾರೆ.