ಹೈದರಾಬಾದ್:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಗಿದ ಬೆನ್ನಲ್ಲೇ, ಟಿ20 ವಿಶ್ವಕಪ್ ನಡೆಯಲಿದೆ. ವಿಶ್ವ ಟೂರ್ನಿಗೆ ತಂಡಗಳು ಸಿದ್ಧತೆ ನಡೆಸುತ್ತಿವೆ. ಪಂದ್ಯಾವಳಿಗೆ ತಂಡಗಳು ಸರ್ವಸನ್ನದ್ಧವಾಗಲು ಅಭ್ಯಾಸ ಪಂದ್ಯಗಳನ್ನೂ ನಡೆಸಲಾಗುತ್ತಿದೆ. ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಕೆಲ ಆಟಗಾರರು ಈ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ.
ಪ್ರಸ್ತುತ ಸಾಗುತ್ತಿರುವ ಐಪಿಎಲ್ ಇನ್ನೇನು ಕೊನೆಯ ಘಟ್ಟಕ್ಕೆ ಬಂದಿದೆ. ಮೇ 21 ರಿಂದ ಪ್ಲೇಆಫ್ ಪಂದ್ಯಗಳು ಆರಂಭವಾಗಲಿವೆ. ಮೊದಲ ಕ್ವಾಲಿಫೈಯರ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದರ ಬಳಿಕ ಎಲಿಮಿನೇಟರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ಸೆಣಸಾಡಲಿವೆ.
ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಆಸ್ಟ್ರೇಲಿಯಾದ ಕೆಲ ಆಟಗಾರರು ಐಪಿಎಲ್ನಲ್ಲಿ ಆಡುತ್ತಿದ್ದು, ಅವರು ಅಭ್ಯಾಸ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಪ್ಲೇ ಆಫ್ಗೆ ಬಂದಿರುವ ತಂಡಗಳ ಪೈಕಿ ರಾಜಸ್ಥಾನ ರಾಯಲ್ಸ್ ಮಾತ್ರ ಆಸೀಸ್ ಆಟಗಾರರನ್ನು ಹೊಂದಿಲ್ಲ. ಉಳಿದ ಮೂರೂ ಟೀಂಗಳು ಕಾಂಗರೂ ಪಡೆಯ ಆಟಗಾರನ್ನು ಹೊಂದಿವೆ.
ಆಸೀಸ್ ಕೋಚ್ ಹೇಳಿದ್ದೇನು?:ಹೀಗಾಗಿ 2024 ರ ಟಿ20 ವಿಶ್ವಕಪ್ಗೆ ಮುನ್ನ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯುವ ಅಭ್ಯಾಸ ಪಂದ್ಯಗಳಲ್ಲಿ ನಮೀಬಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ ಸೆಣಸಲಿದೆ. ಆ ಎರಡೂ ಪಂದ್ಯಗಳಿಗೆ ತಂಡದ ಎಲ್ಲ ಆಟಗಾರರು ಭಾಗವಹಿಸುವುದಿಲ್ಲ ಎಂದು ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.