ಮೆಲ್ಬೋರ್ನ್,ಆಸ್ಟ್ರೇಲಿಯಾ:ಮೆಲ್ಬೋರ್ನ್, ಆಸ್ಟ್ರೇಲಿಯಾ: ಚೊಚ್ಚಲ ಪಂದ್ಯದಲ್ಲಿ ಸ್ಯಾಮ್ ಕೊನ್‌ಸ್ಟಾಸ್ 65 ಎಸೆತಗಳಲ್ಲಿ ಬಿರುಸಿನ 60 ರನ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಗುರುವಾರ ಎಂಸಿಜಿಯಲ್ಲಿ ಆರಂಭವಾಗಿರುವ ನಾಲ್ಕನೇ ಟೆಸ್ಟ್‌ನ ಮೊದಲ ದಿನದ ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ 25 ಓವರ್‌ಗಳಲ್ಲಿ ಒಂದು ವಿಕೆಟ್ ಕೆಳದುಕೊಂಡು 112ರನ್ ಗಳನ್ನು ಸೇರಿಸಿದೆ.
90,000 ಕ್ಕೂ ಹೆಚ್ಚು ಅಭಿಮಾನಿಗಳ ಮುಂದೆ, ಕೊನ್‌ಸ್ಟಾಸ್ ನಾಲ್ಕು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳೊಂದಿಗೆ 60 ರನ್ ಗಳನ್ನು ಬಾರಿಸಿ ಮಿಂಚಿದರು. ಉಸ್ಮಾನ್ ಖವಾಜಾ ಅವರೊಂದಿಗೆ ಸೇರಿ ಆರಂಭಿಕ ವಿಕೆಟ್‌ಗೆ 89 ರನ್‌ಗಳನ್ನು ಸೇರಿಸಿದರು. ಇದು ಈ ಸರಣಿಯಲ್ಲಿ ಆಸ್ಟ್ರೇಲಿಯಾದ ಗರಿಷ್ಠ ಆರಂಭಿಕ ಪಾಲುದಾರಿಕೆಯಾಗಿದೆ. ರವೀಂದ್ರ ಜಡೇಜಾ ಅವರ ನೇರ ಎಸೆತದಿಂದ ಕೊನ್‌ಸ್ಟಾಸ್ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಇದಕ್ಕೂ ಮುನ್ನ ಅವರು MCG ಅಂಗಳದಲ್ಲಿ ಪ್ರತಿಯೊಬ್ಬ ವ್ಯಕ್ತಿಯಿಂದ ಪ್ರಶಂಸೆಗೆ ಭಾಜನರಾದರು.
ಇಂದಿನಿಂದ ಶುರುವಾಗಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು . ಉಸ್ಮಾನ್ ಖವಾಜಾ ಅವರೊಂದಿಗೆ ಸ್ಯಾಮ್ ಕಾನ್ಸ್ಟಾಸ್ ಬ್ಯಾಟಿಂಗ್ ಆರಂಭಿಸಿದ್ದರು.
ಭಾರತವು ಅಗ್ರ ಕ್ರಮಾಂಕದ ಶುಭಮನ್ ಗಿಲ್ ಬದಲಿಗೆ ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಆಡುವ 11ರ ಪಟ್ಟಿಯಲ್ಲಿ ಸೇರಿಸಿದೆ. ಮತ್ತೊಂದೆಡೆ, ಆಸ್ಟ್ರೇಲಿಯಾವು ಆರಂಭಿಕ ಆಟಗಾರ ಸ್ಯಾಮ್ ಕೊನ್‌ಸ್ಟಾಸ್‌ಗೆ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಅವಕಾಶ ಮಾಡಿಕೊಟ್ಟಿದೆ. ಗಾಯಗೊಂಡ ಜೋಶ್ ಹ್ಯಾಜಲ್‌ವುಡ್ ಬದಲಾಗಿ ವೇಗಿ ಸ್ಕಾಟ್ ಬೋಲ್ಯಾಂಡ್ ಕಣಕ್ಕಿಳಿದಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಗ್ರ ಕ್ರಮಾಂಕದಲ್ಲಿ ಆಡಲಿದ್ದಾರೆ.