ಕಾನ್ಪುರ (ಉತ್ತರ ಪ್ರದೇಶ): ಇಲ್ಲಿಯ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ನೋಡಲು ಮೈದಾನಕ್ಕೆ ಬಂದ ಬಾಂಗ್ಲಾದ ಅಭಿಮಾನಿ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಪಂದ್ಯ ಆರಂಭವಾಗಿ ಒಂದು ಗಂಟೆಯ ಬಳಿಕ ಮಳೆಯಿಂದಾಗಿ ಊಟದ ವಿರಾಮ ಘೋಷಿಸಿ ಕೆಲ ನಿಮಿಷಗಳ ಕಾಲ ಪಂದ್ಯವನ್ನು ನಿಲ್ಲಿಸಲಾಗಿತ್ತು. ಈ ವೇಳೆ ಮೈದಾನದ ಗೇಟ್ ನಂಬರ್ 7ರ ಬಳಿ ಪಂದ್ಯ ನೋಡಲು ಬಂದಿದ್ದ ಬಾಂಗ್ಲಾದೇಶ ಅಭಿಮಾನಿಗೆ ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು, ಆತನನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ.
ಪಿಟಿಐ ವರದಿ ಪ್ರಕಾರ, ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಬಾಂಗ್ಲಾದೇಶ ಕ್ರಿಕೆಟ್ ತಂಡದ 'ಸೂಪರ್ ಫ್ಯಾನ್' ಟೈಗರ್ ರಾಬಿ ಎಂಬುವವರನ್ನು ಕೆಲವರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಎಸಿಪಿ ಅಭಿಷೇಕ್ ಪಾಂಡೆ ಅವರು ಪ್ರತಿಕ್ರಿಯೆ ನೀಡಿದ್ದು, ಬಾಂಗ್ಲಾದ ಯಾವುದೇ ಬೆಂಬಲಿಗರನ್ನು ಥಳಿಸಲಾಗಿಲ್ಲ. ಕ್ರಿಕೆಟ್ ನೋಡಲು ಬಂದಿದ್ದ ಬಾಂಗ್ಲಾ ಬೆಂಬಲಿಗನ ಆರೋಗ್ಯದಲ್ಲಿ ಏರುಪೇರಾಗಿದೆ. ಯಾರು ಆತನನನ್ನು ಥಳಿಸಿಲ್ಲ. ಸುಖಾ ಸುಮ್ಮನೆ ಸುಳ್ಳು ಸುದ್ದಿ ಹಬ್ಬಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಪಂದ್ಯ ಆರಂಭಕ್ಕೂ ಮುನ್ನ ವಿಶ್ವ ಹಿಂದೂ ಪರಿಷತ್‌ನ ಪದಾಧಿಕಾರಿಗಳು ಇಂದು ಬೆಳಗ್ಗೆ ಗ್ರೀನ್ ಪಾರ್ಕ್ ಸ್ಟೇಡಿಯಂನ ಹೊರಗೆ ಪ್ರತಿಭಟನೆ ನಡೆಸಿದ್ದರು. ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ನಿರಂತರ ದೌರ್ಜನ್ಯ ಮತ್ತು ದೇವಾಲಯಗಳ ಮೇಲಿನ ದಾಳಿಯಿಂದ ಕೆಲ ಸಂಘಟನೆಗಳು ಕೋಪಗೊಂಡು ಈ ಪಂದ್ಯವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದವು. ಕೂಡಲೇ ಎಚ್ಚೆತ್ತ ಪೊಲೀಸರು ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚರಿಕೆ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ ಮೈದಾನದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಇದನ್ನೂ ಓದಿ:2ನೇ ಟೆಸ್ಟ್ನಲ್ಲಿ ಶಾಕಿಂಗ್ ನಿರ್ಧಾರ ತೆಗೆದುಕೊಂಡ ರೋಹಿತ್ ಶರ್ಮಾ: 60 ವರ್ಷದಲ್ಲೇ ಇದು ಎರಡನೇ ಬಾರಿ - Rohit Sharma shocking decision