ರಾಜ್‌ಕೋಟ್ (ಗುಜರಾತ್) :ಭಾರತದ ಹಿರಿಯ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧ 500 ವಿಕೆಟ್ಗಳ ಮೈಲಿಗಲ್ಲು ನೆಟ್ಟ ಕೆಲವೇ ಗಂಟೆಗಳಲ್ಲಿ ಪಂದ್ಯದಿಂದ ಹೊರಬಂದಿದ್ದಾರೆ. ಕೌಟುಂಬಿಕ ಕಾರಣದ ಹಿನ್ನೆಲೆ ಅವರು ಪಂದ್ಯವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಚೆನ್ನೈಗೆ ಮರಳಿದ್ದಾರೆ.
ಈ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿ ನೀಡಿದ್ದು, ಅಶ್ವಿನ್ ಅವರು ಕುಟುಂಬಸ್ಥರ ತುರ್ತು ವೈದ್ಯಕೀಯ ಕಾರಣಕ್ಕಾಗಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಿಂದ ಹಿಂದೆ ಸರಿದಿದ್ದಾರೆ. ಈ ಸವಾಲಿನ ಸಮಯದಲ್ಲಿ ಅಶ್ವಿನ್ ಅವರನ್ನು ಬಿಸಿಸಿಐ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಮಾಧ್ಯಮ ಪ್ರಕಟಣೆ ನೀಡಿದೆ.
ಆದಾಗ್ಯೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅಶ್ವಿನ್ ಅವರು ಪಂದ್ಯದಿಂದ ಹೊರಬರಲು ನಿಖರವಾದ ಕಾರಣವನ್ನು ಬಹಿರಂಗಪಡಿಸಿಲ್ಲ. ಜೊತೆಗೆ ಕ್ರಿಕೆಟಿಗನ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳಲ್ಲಿ ವಿನಂತಿ ಮಾಡಿದೆ. ಅಶ್ವಿನ್ ಅವರ ಪ್ರೀತಿಪಾತ್ರರ ಯೋಗಕ್ಷೇಮವು ಅತ್ಯಂತ ಮಹತ್ವದ್ದಾಗಿದೆ. ಅವರು ಅರ್ಧದಲ್ಲೇ ಪಂದ್ಯ ತೊರೆದಿದ್ದಾರೆ. ಇದಕ್ಕೆ ಬಿಸಿಸಿಐ ಅಗತ್ಯ ಬೆಂಬಲ ನೀಡಲಿದೆ. ಕ್ರಿಕೆಟಿಗನ ಖಾಸಗಿತನ ಮತ್ತು ಅಗತ್ಯವನ್ನು ಎಲ್ಲರೂ ಗೌರವಿಸಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
10 ಆಟಗಾರರೊಂದಿಗೆ ಆಡಲಿತುವ ಭಾರತ:ಅಶ್ವಿನ್ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ ಟೆಸ್ಟ್ನ ಉಳಿದ ಭಾಗವನ್ನು 10 ಆಟಗಾರರೊಂದಿಗೆ ಆಡಲಿದೆ. ನಾಲ್ವರು ಸ್ಪೆಷಲಿಸ್ಟ್ ಬೌಲರ್ಗಳು ಮಾತ್ರ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಬೇಕಿದೆ. ರಾಂಚಿ, ಧರ್ಮಶಾಲಾ ನಡೆಯಲಿರುವ ಕೊನೆಯ ಎರಡು ಪಂದ್ಯಗಳಿಗೂ ಕೇರಂ ಸ್ಪೆಷಲಿಸ್ಟ್ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ.
ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅಶ್ವಿನ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆಯಬಹುದು. ಬದಲಿ ಆಟಗಾರರಾಗಿ ಜಯಂತ್ ಯಾದವ್, ಜಲಜ್ ಸಕ್ಸೇನಾ ಅಥವಾ ಪುಲ್ಕಿತ್ ನಾರಂಗ್ ಅವಕಾಶ ಪಡೆಯುವ ಸಾಧ್ಯತೆ ಇದೆ. ಈಗಾಗಲೇ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಕ್ಕಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಿಂದಲೇ ಹೊರಗುಳಿದಿದ್ದಾರೆ.
ಇನ್ನು, ಪಂದ್ಯದಲ್ಲಿ ಇಂಗ್ಲೆಂಡ್ ಹಿಡಿತ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಆಂಗ್ಲರು 2 ವಿಕೆಟ್ಗೆ 207 ರನ್ ಗಳಿಸಿದ್ದಾರೆ. ಆರಂಭಿಕ ಬ್ಯಾಟರ್ ಬೆನ್ ಡಕೆಟ್(133) ಬಾಜ್ಬಾಲ್ ಶೈಲಿಯಲ್ಲಿ ಭರ್ಜರಿ ಶತಕ ಗಳಿಸಿ ಆಡುತ್ತಿದ್ದಾರೆ. ಮೊದಲು ಬ್ಯಾಟ್ ಮಾಡಿರುವ ಭಾರತ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾರ ಶತಕದ ಬಲದಿಂದ 455 ರನ್ ಗಳಿಸಿದೆ. ಇಂಗ್ಲೆಂಡ್ 238 ರನ್ ಹಿಂದಿದೆ.
ಇದನ್ನೂ ಓದಿ:IND Vs ENG 3ನೇ ಟೆಸ್ಟ್: ಬೆನ್ ಡಕೆಟ್ ಸಿಡಿಲಬ್ಬರದ ಶತಕ; ಇಂಗ್ಲೆಂಡ್ 207/2 ರನ್