ಪ್ಯಾರಿಸ್:ಶನಿವಾರ ಇಲ್ಲಿ ನಡೆದ ಫ್ರೆಂಚ್ ಓಪನ್ ಪುರುಷರ ಡಬಲ್ಸ್‌ನಲ್ಲಿ ಎಲ್ ಸಾಲ್ವಡಾರ್‌ನ ಮಾರ್ಸೆಲೊ ಅರೆವಾಲೊ ಮತ್ತು ಕ್ರೊವೇಷಿಯಾದ ಮೇಟ್ ಪಾವಿಕ್ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದರು. ಇಟಲಿಯ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಸ್ಸೊರಿ ವಿರುದ್ಧ 7-5, 6-3 ನೇರ ಸೆಟ್‌ಗಳಿಂದ ಗೆದ್ದರು.
ಮೇಟ್ ಪಾವಿಕ್ ಪುರುಷರ ಡಬಲ್ಸ್‌ನಲ್ಲಿ ಆಡಿದ ಎಲ್ಲಾ ನಾಲ್ಕು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ಬೀಗಿದರು. ಎಲ್ ಸಾಲ್ವಡಾರ್‌ನ ಅರೆವಾಲೊಗೆ ಇದು ಎರಡನೇ ಡಬಲ್ಸ್ ಪ್ರಶಸ್ತಿಯಾಗಿದೆ. ಗೆದ್ದ ಬಳಿಕ ಇಬ್ಬರೂ ಆಟಗಾರರು ತಮ್ಮ ತಂಡದ ಜೊತೆಗೆ ಮೈದಾನದಲ್ಲಿ ಕುಣಿದಾಡಿ ಸಂಭ್ರಮಾಚರಣೆ ಮಾಡಿದರು.
ಜಿದ್ದಾಜಿದ್ದಿನಿಂದ ಕೂಡಿದ್ದ ಮೊದಲ ಸೆಟ್ನಲ್ಲಿ ಎರಡೂ ಜೋಡಿಗಳು ಗೆಲುವಿಗಾಗಿ ತೀವ್ರ ಸೆಣಸಾಟ ನಡೆಸಿದರು. ಗೇಮ್ 6-5 ರಲ್ಲಿ ಸಾಗಿದಾಗ, ಟ್ರೈ ಬ್ರೇಕರ್ ಮೊರೆ ಹೋಗಲಾಯಿತು. ಇದನ್ನು ಬಳಸಿಕೊಂಡ ಅರೆವಾಲೊ ಮತ್ತು ಪಾವಿಕ್ ಜೋಡಿ ಗೇಮ್ ಅನ್ನು ಗೆಲ್ಲುವ ಮೂಲಕ ಮೊದಲ ಸೆಟ್ ಅನ್ನೂ ವಶಪಡಿಸಿಕೊಂಡರು. ಬಳಿಕ ಎರಡನೇ ಸೆಟ್ನಲ್ಲಿ ಲೀಲಾಜಾಲವಾಗಿ ರಾಕೆಟ್ ಸಿಡಿಸಿದ ಇಬ್ಬರೂ, ಇಟಲಿಯ ಜೋಡಿಯನ್ನು ಕಂಗೆಡುವಂತೆ ಮಾಡಿದರು. ಇದರಿಂದ 6-3 ರಲ್ಲಿ ಸೆಟ್ ಜಯಿಸಿ, ಡಬಲ್ಸ್ ಟ್ರೋಫಿಗೆ ಮುತ್ತಿಕ್ಕಿದರು.
ಅರೆವಾಲೊ- ಪಾವಿಕ್ ಜೋಡಿ ಟೂರ್ನಿಯಲ್ಲಿ ಒಂಬತ್ತನೇ ಶ್ರೇಯಾಂಕ ಹೊಂದಿದ್ದರು. ಕ್ರೊವೇಷಿಯಾದ ಪಾವಿಕ್ ಹಾಲಿ ಒಲಂಪಿಕ್ಸ್ ಡಬಲ್ಸ್ ಚಾಂಪಿಯನ್ ಆಗಿದ್ದಾರೆ. ಎಲ್ ಸಾಲ್ವಡಾರ್‌ನ ಅರೆವಾಲೊ 2022 ರಲ್ಲಿ ಫ್ರೆಂಚ್ ಓಪನ್ ಡಬಲ್ಸ್ ಚಾಂಪಿಯನ್ ಆಗಿದ್ದರು. ಜೀನ್ ಜೂಲಿಯನ್ ರೋಜರ್ ಅವರೊಂದಿಗೆ ಪ್ರಶಸ್ತಿ ಗೆದ್ದಿದ್ದರು.